ಕಾಂಗ್ರೆಸ್‌ನಲ್ಲಿ ಜಾತಿ ರಾಜಕಾರಣ ಶುರುವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದಶಿ ಎಚ್.ಆರ್.ಶ್ರೀನಾಥ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಮಾರ್ಗವಾಗಿ ತೆರಳುತ್ತಿದ್ದ ಅವರು, ಕಾಂಗ್ರೆಸ್ ಪಕ್ಷದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ತೆರಳುತ್ತಿರುವ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ಹಿಂದೆಲ್ಲ ಎಲ್ಲ ಕ್ಷೇತ್ರಗಳಿಗೂ ವಿವಿಧ ಜಾತಿಗಳಿಗೆ ಸಮಾನ ಅವಕಾಶ ನೀಡಲಾಗುತ್ತಿತ್ತು. ಸದ್ಯ ಜಾತಿ ಆಧಾರದ ರಾಜಕಾರಣ ನಡೆಯುತ್ತಿದೆ. ಹಾಲಿ ಶಾಸಕರುಗಳಿಗೆ ನಿಗಮ ಮಂಡಳಿಗಳ ಸ್ಥಾನ ಮಾನ ನೀಡಿ ಕಾರ್ಯಕರ್ತರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ವಿಚಾರದಲ್ಲಿ ಹೈಕಮಾಂಡ್ ಬಗ್ಗೆ ಅಸಮಾಧಾನವಿದೆ. ಇಕ್ಬಾಲ್ ಅನ್ಸಾರಿ ಕೈಜೋಡಿಸಿದ್ದಿದ್ದರೆ ಗೆಲುವು ಸಾಧಿಸುತ್ತಿದ್ದರು ಎಂದರು.
ರೈಲು ಮಾರ್ಗದಿಂದ ಅನುಕೂಲ
ದರೋಜಿ-ಬಾಗಲಕೋಟೆ ರೈಲು ಮಾರ್ಗದಿಂದ ಕನಕಗಿರಿ, ಕುಷ್ಟಗಿಯಂತಹ ಪಟ್ಟಣಗಳು ಅಭಿವೃದ್ಧಿ ಹೊಂದುತ್ತವೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ದರೋಜಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಗೆ ಅನುದಾನ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದಶಿ ಎಚ್.ಆರ್.ಶ್ರೀನಾಥ, ದರೋಜಿ-ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಸಂಚಾಲಕ ಎಚ್.ಆರ್.ಶ್ರೀನಾಥ ಹೇಳಿದರು. ಈ ಮಾರ್ಗ ಆರಂಭದಿಂದ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.
ಇದರಿಂದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಾಗಿ, ಕೈಗಾರಿಕೆ ಉದ್ಯಮಗಳ ಸಂಖ್ಯೆ ಹೆಚ್ಚಾಗಿ ರೈತರ ಜಮೀನುಗಳಿಗೂ ಉತ್ತಮ ಬೆಲೆ ಸಿಗಲಿದೆ. ಈ ಮಾರ್ಗದ ಆರಂಭದಿಂದ ಜಿಲ್ಲೆಯ ಜನ ಉತ್ತರ ಹಾಗೂ ದಕ್ಷಿಣ ಭಾರತದ ವಿವಿಧೆಡೆ ಸಂಪರ್ಕ ಸಾಧಿಸಲಿದ್ದಾರೆ. ರೈಲ್ವೆ ಮಾರ್ಗದ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಬಳ್ಳಾರಿ, ಕೊಪ್ಪಳ ಹಾಗೂ ಬಾಗಲಕೋಟೆ ಸಂಸದರುಗಳಿಗೆ ಒತ್ತಾಯಿಸಲಾಗಿದೆ ಎಂದರು.