ಚಿಂತಾಮಣಿ: ಒಂದು ದಶಕದ ನಂತರ ನಗರದ ಮುಖ್ಯರಸ್ತೆ ಮತ್ತು ಪಾದಚಾರಿ ರಸ್ತೆ ಒತ್ತುವರಿಗೆ ತೆರವಿಗೆ ನಗರಸಭೆ ಮುಂದಾಗಿದ್ದು, ಒತ್ತುವರಿ ತೆರವಿಗೆ ಅಂಗಡಿ ಮಾಲೀಕರಿಗೆ ಗಡುವು ನಿಗದಿಪಡಿಸಿದ ಬೆನ್ನಲ್ಲೇ ಸೋಮವಾರ ಬೆಳಗ್ಗೆಯಿಂದಲೇ ಒತ್ತುವರಿ ತೆರವು ಕಾರ್ಯ ಆರಂಭಿಸಲಾಯಿತು.
ನಗರದ ಬೆಂಗಳೂರು ಜೋಡಿ ರಸ್ತೆಯ ಬಹುತೇಕ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವು ಮಾಡಿದರೆ, ತೆರವು ಮಾಡದ ಜಾಗದಲ್ಲಿ ಕಾರ್ಯಾಚರಣೆ ಮಾಡಲಾಯಿತು.
ಬೆಂಗಳೂರು ಜೋಡಿ ರಸ್ತೆಯ ಬಹುತೇಕ ಅಂಗಡಿ ಮಾಲೀಕರು ಮುಖ್ಯರಸ್ತೆ ಮತ್ತು ುಟ್‌ಪಾತ್ ಒತ್ತುವರಿ ಮಾಡಿದ್ದಲ್ಲದೆ, ಅಂಗಡಿಗಳ ಮುಂದೆ ತಗಡಿನ ಶೀಟ್ ಅಳವಡಿಸಿಕೊಂಡ ಪರಿಣಾಮ ಮತ್ತು ಹಲವು ಕಡೆ ುಟ್‌ಪಾತ್ ಪೂರ್ತಿಯಾಗಿ ಒತ್ತುಯಾಗಿತ್ತು. ಜತೆಗೆ ುಟ್‌ಪಾತ್ ಒತ್ತುವರಿ ಮಾಡಿ ಮೆಟ್ಟಿಲು ನಿರ್ಮಿಸಿದ್ದರಿಂದ ಪಾದಚಾರಿಗಳ ಸುಗಮ ಸಂಚಾರಕ್ಕೂ ತೊಂದರೆಯಾಗಿತ್ತು.
ನಗರದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತುಕೊಂಡ ಸಚಿವರು ಡೆಲ್ಟ್ ಯೋಜನೆಯಡಿ ನಗರದ ಬೆಂಗಳೂರು ಜೋಡಿ ರಸ್ತೆಯಲ್ಲಿ ಪಾದಚಾರಿ ರಸ್ತೆ ನಿರ್ಮಾಣ, ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಮುಂದಾಗಿದ್ದರು. ಆದರೆ, ಅಭಿವೃದ್ಧಿ ಕಾಮಗಾರಿಗೆ ಒತ್ತುವರಿಯೇ ಸಮಸ್ಯೆಯಾಗಿತ್ತು. ಇದೀಗ ನಗರಸಭೆ ಪೌರಾಯುಕ್ತ ಜಿ.ಎನ್. ಚಲಪತಿ ನೇತೃತ್ವದಲ್ಲಿ ಒತ್ತುವರಿ ತೆರವು ಶುರುವಾಗಿದೆ.
ಸೋಮವಾರ ಬೆಳಗ್ಗೆ ಎರಡು ಜೆಸಿಬಿಗಳ ನೆರವಿನಿಂದ ಬೆಂಗಳೂರು ಜೋಡಿ ರಸ್ತೆಯಲ್ಲಿ ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಕೆಲವರು ಸ್ವಯಂಪ್ರೇರಿತರಾಗಿ ತೆರವು ಮಾಡಿದರು. ಝಾನ್ಸಿ ರಾಣಿ ಮೈದಾನದ ಮಳಿಗೆಗಳ ಮುಂದೆ, ಬೆಂಗಳೂರು ಜೋಡಿ ರಸ್ತೆಯಲ್ಲಿ ಬಹುತೇಕ ಅಂಗಡಿ ಮಾಲೀಕರೇ ಸ್ವಯಂಪ್ರೇರಿತರಾಗಿ ಒತ್ತುವರಿ ತೆರವು ಮಾಡಿದ್ದರಿಂದ ರಸ್ತೆ ವಿಶಾಲವಾಗಿ ಕಾಣಿಸುತ್ತಿರುವುದನ್ನು ಕಂಡು ಸಾರ್ವಜನಿಕರು ಖುಷಿಪಟ್ಟರು.
ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ಇತ್ತೀಚೆಗೆ ನಗರದಲ್ಲಿ ಅಪಘಾತಗಳು ಹೆಚ್ಚಾಗಿ ಸಾವುನೋವು ಸಂಭವಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಗರಸಭೆ ಮತ್ತು ಪೊಲೀಸ್ ಇಲಾಖೆಯತ್ತ ಬೆರಳು ತೋರಿಸುತ್ತಿದ್ದರು. ಹಾಗಾಗಿ ಸುಗಮ ಸಂಚಾರದ ಹಿನ್ನೆಲೆಯಲ್ಲಿ ನಗರದಾದ್ಯಂತ ಒತ್ತುವರಿ ತೆರವು ಮಾಡಲಾಗುವುದು. ಸ್ವಯಂಪ್ರೇರಿತರಾಗಿ ಒತ್ತುವರಿ ತೆರವು ಮಾಡಿದವರಿಗೆ ಧನ್ಯವಾದ ಸಲ್ಲಿಸಿದರು. ರಸ್ತೆ, ಪಾದಚಾರಿ ರಸ್ತೆ ಒತ್ತುವರಿ ಮಾಡಿರುವ ನಗರದ ಎಲ್ಲ ಮುಖ್ಯರಸ್ತೆಗಳಲ್ಲಿರುವ ಅಂಗಡಿ ಮಾಲೀಕರು ತೆರವು ಮಾಡುವಂತೆ ಕೋರಿದರು.
ಚೇಳೂರು ರಸ್ತೆಗೆ ಮೂರು ದಿನ ಕಾಲಾವಕಾಶ ನೀಡಿದ್ದು, ನಂತರ ಇತರ ರಸ್ತೆಗಳಲ್ಲಿ ಒತ್ತುವರಿ ತೆರವಿಗೆ ಎರಡು ದಿನ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾಧ್ಯಕ್ಷ ರಾಣಿಯಮ್ಮ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ನಗರಸಭೆ ಜೆಇ ಪ್ರಸಾದರೆಡ್ಡಿ, ಆರೋಗ್ಯ ನಿರೀಕ್ಷಕರಾದ ಆರತಿ, ವಿಜಯಕುಮಾರ್, ಸಿ.ಕೆ.ಬಾಬು, ಪಿಎಸ್‌ಐ ರಮೇಶ್, ಕಂದಾಯ ಅಧಿಕಾರಿಗಳು, ನಗರಸಭೆ ಪೌರಕಾರ್ಮಿಕರು ಇತರರಿದ್ದರು.