ಹುಬ್ಬಳ್ಳಿ: ಟಿಕೆಟ್ ವಂಚನೆಯ ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರ ಹೆಸರು ತಳಕು ಹಾಕುವುದು ಸರಿಯಲ್ಲ ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪ ರ್ಬಾ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಪ್ರಕರಣದ ಆರೋಪಿ ಗಗನ ಕಡೂರ ನಮ್ಮ ಸಂಘದ ಸದಸ್ಯರಾಗಿದ್ದು, ಇವರ ವಿವಾಹ ಸಮಾರಂಭದಲ್ಲಿ ತಿಮ್ಮಕ್ಕನವರ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವರು ತಿಮ್ಮಕ್ಕನವರ ಹಾಗೂ ಅವರ ದತ್ತು ಪುತ್ರ ಬಳ್ಳೂರ ಉಮೇಶ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಈಗಾಗಲೇ ಗೃಹ ಸಚಿವರು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಗಗನ ಕಡೂರ ಅವರನ್ನು ಸಂಘದ ಸದಸ್ಯತ್ವದಿಂದ ವಜಾ ಮಾಡಿದ್ದೇವೆ. ಇಳಿ ವಯಸ್ಸಿನಲಿಯ್ಲೂ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ತಿಮ್ಮಕ್ಕ ಅವರಿಗೆ ಇದರಿಂದ ಮನಸ್ಸಿಗೆ ತುಂಬ ನೋವಾಗಿದೆ. ಯಾರಾದರೂ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದರೆ ಅಂಥವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಮಹಾಂತೇಶ ತಪಶೆಟ್ಟಿ, ಮೋಹನ ಗುರುಸ್ವಾಮಿ, ಮುತ್ತಪ್ಪ ಅಂಬಿಗೇರ, ಮಹೇಶ ಶೆಟ್ಟರ್, ಹನುಮಂತ ಗೌಡರ್ ಇದ್ದರು.