ಬೆಳಗಾವಿ ಅನಗೋಳದಲ್ಲಿ ಲೋಕಾರ್ಪಣೆಗೊಂಡಿರುವ ಸಂಭಾಜಿ ಪ್ರತಿಮೆ. 
ಜಿಲ್ಲೆ

ಬೆಳಗಾವಿಯಲ್ಲಿ ಪುತ್ಥಳಿ ದಂಗಲ್

ಶಂಕರ ಗೆಜ್ಜಿ

ಬೆಳಗಾವಿ: ಅನಗೋಳದಲ್ಲಿ ನಿರ್ಮಾಣಗೊಂಡಿರುವ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ಕಿಚ್ಚು ರಾಜಕೀಯ ಲೇಪನ ಪಡೆದುಕೊಂಡಿದೆ. ಮತ್ತೊಂದೆಡೆ ಸರ್ಕಾರವು ಸಂಭಾಜಿ ಪ್ರತಿಮೆ ಅನಾವರಣಕ್ಕೆ ಮತ್ತೊಮ್ಮೆ ಮುಂದಾಗಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ. ಇದರಿಂದ ಗಡಿಭಾಗದಲ್ಲಿ ಮತ್ತೊಮ್ಮೆ ಪುತ್ಥಳಿ ದಂಗಲ್ ಆರಂಭಗೊಂಡಂತಾಗಿದೆ.

ಮಹಾನಗರ ಪಾಲಿಕೆಯು 2023-24ರಲ್ಲಿ ಅನಗೋಳದಲ್ಲಿ ಸಂಭಾಜಿ ಮೂರ್ತಿ, ಭವನವನ್ನು ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿದೆ. ಇದೀಗ ಪ್ರತಿಮೆ ಲೋಕಾರ್ಪಣೆ ವಿಷಯಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಉಂಟಾದ ಪರ-ವಿರೋಧ, ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅಲ್ಲದೆ, ಕಾಂಗ್ರೆಸ್, ಎಂಇಎಸ್ ಬೆಂಬಲಿತ ನಾಯಕರು ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಮೂಲಕ ಜ.5ರಂದು ಪಾಲಿಕೆ ಹಮ್ಮಿಕೊಂಡಿದ್ದ ಮೂರ್ತಿ ಅನಾವರಣ ಕಾರ್ಯಕ್ರಮ ತಡೆಯಲು ಪ್ರಯತ್ನಿಸಿದರು. ಈ ಸಂಬಂಧ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ, ಅನಾವರಣ ಬೇಡ ಎಂಬ ಕೂಗು ಕೇಳಿ ಬಂದಿತ್ತು. ಇದರಿಂದ ಮೇಯರ್, ಉಪಮೇಯರ್ ಸ್ಥಳಕ್ಕೆ ಭೇಟಿ ನೀಡಿ ಎಲ್ಲವೂ ಪೂರ್ಣಗೊಂಡಿದೆ. ಶಿಷ್ಟಾಚಾರದಂತೆ ಅನಾವರಣ ಮಾಡಲಾಗುವುದು ಎಂದು ಹೇಳಿದ್ದರು. ಅದೇ ದಿನ ಡಿಸಿ ಭೇಟಿ ನೀಡಿ ಪುತ್ಥಳಿ ಅನಾವರಣದ ಬಗ್ಗೆ ಗೊಂದಲ ಬೇಡ, ಶೀಘ್ರ ಅನಾವರಣ ಮಾಡಲಾಗುವುದು ಎಂದಿದ್ದರು. ಇದಾಗ ಮರುದಿನವೇ ಶಾಸಕ ಅಭಯ ಪಾಟೀಲ ಬೆಂಬಲಿಗರು ನಾವು ಡಿ.5ರಂದೇ ಅನಾವರಣ ಮಾಡುತ್ತೇವೆ ಎಂದು ಹೇಳಿ ಅನಾವರಣ ಮಾಡಿಯೇ ಬಿಟ್ಟರು. ಇದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರನ್ನು ಕರೆಸಿ ಭಾಷಣ ಮಾಡಿಸಿದರು.

ಸರ್ಕಾರದ ಮಧ್ಯಪ್ರವೇಶ ಸರಿಯಲ್ಲ: ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚೌವ್ಹಾಣ, ಸದಸ್ಯರು ಸೇರಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಂಭಾಜಿ ಪ್ರತಿಮೆ ಅನಾವರಣಗೊಂಡಿದೆ. ಇದೀಗ ಮತ್ತೊಮ್ಮೆ ಅನಾವರಣಕ್ಕೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಪಾಲಿಕೆ ಮೇಯರ್ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವಂತಿಲ್ಲ. ಪಾಲಿಕೆ ಮತ್ತು ಸದಸ್ಯರ ಅನುದಾನದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಹಾಗಾಗಿ ರಾಜಕೀಯ ಉದ್ದೇಶಕ್ಕಾಗಿ ಪ್ರತಿಮೆ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ರಾಜಹಂಸಗಡದಲ್ಲಿ ನಿರ್ಮಾಣಗೊಂಡಿದ್ದ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ವೇಳೆಯೂ ಇದೇ ರೀತಿ ವಿರೋಧ ವ್ಯಕ್ತವಾಗಿ ರಾಜಕೀಯ ಸ್ವರೂಪ ಪಡೆದುಕೊಂಡು ರಾಜ್ಯಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಸಂಭಾಜಿ ಪುತ್ಥಳಿ ಅನಾವರಣ ಕೂಡ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವುದು ಚರ್ಚೆಗೆ ಕಾರಣವಾಗುತ್ತಿದೆ.

ಕರ್ನಾಟಕದಲ್ಲಿ ಭಾಗವಾಧ್ವಜ ಹಾರಾಟ ನಿಶ್ಚಿತ

ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅಡ್ಡಿ ಉಂಟು ಮಾಡಿರುವುದು ಸರಿಯಲ್ಲ. ರಾಜಕೀಯ ಉದ್ದೇಶ ಇಟ್ಟುಕೊಂಡು ಸಂಭಾಜಿಗೆ ಅವಮಾನಿಸಿದರೆ ತಕ್ಕ ಪಾಠ ಕಲಿಸುತ್ತೇವೆ. ಔರಂಗಜೇಬ್, ಸುಲ್ತಾನರಿಗೆ ಹೆದರದ ನಾವು ಇವರಿಗೆಲ್ಲ ಹೆದರುವ ಮಾತೇ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಶಿವಾಜಿ ಮಹಾರಾಜರ ವಂಶಸ್ಥ ಶಿವೇಂದ್ರ ಸಿಂಹರಾಜೆ ಭೋಸಲೆ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಭಾಗವಾಧ್ವಜ ಹಾರಾಡುವುದು ನಿಶ್ಚಿತ ಎಂದು ಗುಡುಗಿದ್ದಾರೆ.

ಸಂಭಾಜಿ ಮಹಾರಾಜರ ಪ್ರತಿಮೆ ಕುರಿತು ಜ.4ರಂದು ಸ್ಥಳ ಪರಿಶೀಲಿಸಿದ್ದು, ಕಾಮಗಾರಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರೊಟೋಕಾಲ್ ಪ್ರಕಾರ ಅನಾವರಣ ಮಾಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿತ್ತು. ಜ.5ರಂದು ನಡೆದ ಮೂರ್ತಿ ಅನಾವರಣ ಕಾರ್ಯಕ್ರಮ ಅನಧಿಕೃತವಾಗಿದ್ದು, ತಕ್ಷಣವೇ ನಿಯಮಾನುಸಾರ ಮತ್ತೊಮ್ಮೆ ಮೂರ್ತಿ ಉದ್ಘಾಟನೆಗೆ ಕ್ರಮ ವಹಿಸಲಾಗುವುದು. | ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ