ಜಿಲ್ಲೆ

ಬೆಂಗಳೂರಲ್ಲೇ ಇದ್ರೆ ನಮಗೆ ಸಾವೇ ಗತಿ!: ಹಸಿವಿನಿಂದ ಬಸವಳಿದ ಕಾರ್ವಿುಕರ ನುಡಿ | ಒಬ್ಬೊಬ್ಬರದ್ದೂ ಒಂದೊಂದು ಗೋಳಿನ ಕಥೆ

kumarvrl

ಗಿರೀಶ್ ಗರಗ ಬೆಂಗಳೂರು

ಊರಿಗೆ ಹೋದರೆ ಜೀವ ಉಳಿಸಿಕೊಳ್ಳುವಷ್ಟಾದರೂ ಊಟ ಸಿಗುತ್ತೆ, ಬೆಂಗಳೂರಿನಲ್ಲಿದ್ದರೆ ಸಾಯುವುದೇ ಗತಿ... ಇದು ಊರಿನತ್ತ ಹೊರಟ ಕಟ್ಟಡ ಕಾರ್ವಿುಕರ ಮಾತುಗಳು!

ಲಾಕ್​ಡೌನ್​ನಿಂದ ಹೆಚ್ಚು ಸಮಸ್ಯೆಗೊಳಗಾದವರು ಕಾರ್ವಿುಕರು. ಕೆಲಸವಿಲ್ಲ, ಆದಾಯವಿಲ್ಲ, ಉಳಿದುಕೊಳ್ಳಲು ಮನೆಯಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಊಟ ಸಿಗುತ್ತಿಲ್ಲ. ಒಂದೂವರೆ ತಿಂಗಳಿನಿಂದ ಹಲವು ‘ಇಲ್ಲ’ಗಳ ನಡುವೆಯೇ ದಿನ ದೂಡಿದವರು ಈಗ ರಾಜ್ಯ ಸರ್ಕಾರದ ನೆರವಿನೊಂದಿಗೆ ತಂತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕುಟುಂಬದವರನ್ನು ಸೇರಿಕೊಳ್ಳುವ ಸಮಾಧಾನ ಒಂದೆಡೆಯಾದರೆ, ಅಲ್ಲಿ ಹೋಗಿ ಮಾಡುವುದಾದರೂ ಏನು ಎಂಬುದು ಚಿಂತೆಗೀಡುಮಾಡಿದೆ. ಆದರೂ, ‘ತಮ್ಮೂರೇ ತಮಗೆ ಮೇಲು’ ಎಂಬ ಭಾವನೆ ಪ್ರತಿಯೊಬ್ಬರದ್ದಾಗಿದೆ.

ಊಟವೂ ಇಲ್ಲ, ಕರೆ ತಂದವರು ಪತ್ತೆಯಿಲ್ಲ:

ಪ್ರತಿ ಹೊತ್ತಿಗೂ ದಾನಿಗಳು ನೀಡುವ ಆಹಾರ ಕ್ಕಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಕಟ್ಟಡ ಕಾರ್ವಿುಕರಿಗೆ ಎದುರಾಗಿತ್ತು. ಅಲ್ಲದೆ, ಊರಿಂದ ಕೆಲಸಕ್ಕಾಗಿ ಕರೆತಂದ ಮೇಸ್ತ್ರಿಗಳು ಕಷ್ಟ ಕಾಲದಲ್ಲಿ ಬಳಿಗೆ ಸುಳಿದಿರಲಿಲ್ಲ. ನಿವೇಶನಗಳಲ್ಲಿ ಶೆಡ್ ನಿರ್ವಿುಸಿ ಮಲಗಲು ಅವಕಾಶ ನೀಡಿದ್ದರಾದರೂ ಇತರ ಅಗತ್ಯ ವ್ಯವಸ್ಥೆ ಗಳನ್ನು ಮಾಡಿರಲಿಲ್ಲ. ಪ್ರತಿ ಕಾರ್ವಿುಕರು ತಮ್ಮಲ್ಲಿದ್ದ ಚೀಲದಲ್ಲಿ, ತಮ್ಮ ಜೀವನದಲ್ಲಿ ಈವರೆಗೆ ಸಂಪಾದಿಸಿದ್ದ ಪಾತ್ರೆ, ಬಟ್ಟೆಗಳನ್ನು ತುಂಬಿಕೊಂಡು ಊರಿಗೆ ಹೊರಟ ದೃಶ್ಯ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡುಬಂತು. ಪತಿ ಮತ್ತು ಪತ್ನಿ ಕೇವಲ ಎರಡು ಚೀಲಗಳಲ್ಲಿ ತಮ್ಮಲ್ಲಾ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದರು.

ಬೆಂಗಳೂರು ಸಹವಾಸ ಬ್ಯಾಡ್ರಿ: ಬಹುತೇಕ ಕಾರ್ವಿುಕರು ಬೆಂಗಳೂರಿನ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು! ಊರಲ್ಲಿದ್ದರೆ ಇರುವ ಅಲ್ಪಸ್ವಲ್ಪ ಹೊಲದಲ್ಲಿಯೇ ಕೃಷಿ ಮಾಡೋಣ ಅಥವಾ ತಮ್ಮ ಊರಿಗೆ ಹತ್ತಿರದ ನಗರಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸೋಣ ಎಂದು ಹೇಳುತ್ತಿದ್ದರು. ‘ಬೆಂಗಳೂರಿನಲ್ಲಿ ಈವರೆಗೆ ಯಾವುದೋ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ, ಊರಲ್ಲಿ ಹೊಲವೂ ಇಲ್ಲ, ಕೆಲಸವೂ ಇಲ್ಲ. ಬೆಂಗಳೂರಿನಿಂದ ಬಂದವರೆಂದು ತಮ್ಮನ್ನು ಊರೊಳಗೆ ಬಿಟ್ಟುಕೊಳ್ಳುವುದೇ ಅನುಮಾನ’ ಎಂಬುದು ಕೆಲವರ ಆತಂಕ.

ಒಂದು ವಾರದ ಯೋಜನೆ

ವಲಸೆ ಕಾರ್ವಿುಕರನ್ನು ಊರಿಗೆ ಕಳುಹಿಸುವ ಕುರಿತು ಕೆಎಸ್​ಆರ್​ಟಿಸಿ ಅಧಿಕಾರಿಗಳು ಕಳೆದೊಂದು ವಾರದಿಂದ ಸಿದ್ಧತೆ ನಡೆಸಿದ್ದರು. ಬೆಂಗಳೂರು ಸುತ್ತಮುತ್ತ ವಾಸಿಸಿರುವ ಚಾಲಕರಿಗೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿರುವಂತೆ ಸೂಚಿಸಲಾಗಿತ್ತು. ಅದರಿಂದ ಸರ್ಕಾರ ವಲಸೆ ಕಾರ್ವಿುಕರನ್ನು ಕರೆದುಕೊಂಡು ಹೋಗಲು ಸೂಚಿಸುತ್ತಿದ್ದಂತೆ, ಕೆಎಸ್​ಆರ್​ಟಿಸಿ ಗೊಂದಲವಿಲ್ಲದೆ ವ್ಯವಸ್ಥೆ ಮಾಡಿಕೊಂಡಿತು.

ನಾಲ್ಕು ಶ್ರಮಿಕ್ ರೈಲುಗಳಲ್ಲಿ ಪ್ರಯಾಣ

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿದ್ದ ಹೊರರಾಜ್ಯದ ಕಾರ್ವಿುಕರಿಗಾಗಿ ಭಾನುವಾರ 4 ‘ಶ್ರಮಿಕ್’ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಮಾಲೂರು ನಿಲ್ದಾಣದಿಂದ ಬಿಹಾರದ ಧನಪುರಕ್ಕೆ ಎರಡು ರೈಲುಗಳು, ಜಾರ್ಖಂಡ್​ನ ಹಟಿಯಾಗೆ ಒಂದು ರೈಲು ಮತ್ತು ಚಿಕ್ಕಬಾಣಾವಾರ ನಿಲ್ದಾಣದಿಂದ ಒಡಿಶಾದ ಭುವನೇಶ್ವರಕ್ಕೆ 1 ರೈಲು ತೆರಳಿತು. ಮೂರು ರೈಲುಗಳಿಂದ ಒಟ್ಟಾರೆ 4,787 ಕಾರ್ವಿುಕರು ಪ್ರಯಾಣಿಸಿದರು. ಕಾರ್ವಿುಕರನ್ನು ರೈಲು ನಿಲ್ದಾಣಕ್ಕೆ ಕರೆತರಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಬಸ್ ನಿಲ್ದಾಣದಲ್ಲೇ ವಾಸ್ತವ್ಯ

ಊರಿಗೆ ತೆರಳಲು ಶನಿವಾರ ಬಂದಿದ್ದವರಿಗೆ ಬಸ್ ದೊರೆಯದ ಕಾರಣ ರಾತ್ರಿಯಿಡೀ ಬಸ್ ನಿಲ್ದಾಣದಲ್ಲೇ ಉಳಿಯುವಂತಾಗಿತ್ತು. ಭಾನುವಾರ ರಾತ್ರಿಯಾದರೂ ಕಾರ್ವಿುಕರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಹೀಗಾಗಿ ರಾತ್ರಿ 7 ಗಂಟೆವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಉಳಿದವರನ್ನು ಸೋಮವಾರ ಕಳುಹಿಸಿಕೊಡಲು ಅಧಿಕಾರಿಗಳು ನಿರ್ಧರಿಸಿದರು.

ಬೇರೆ ವಿಭಾಗಗಳ 200 ಬಸ್

ಕೆಎಸ್​ಆರ್​ಟಿಸಿ ಮಾತ್ರವಲ್ಲದೆ, ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಂದ 200 ಬಸ್​ಗಳನ್ನು ತರಿಸಲಾಗಿತ್ತು. ಕಾರ್ವಿುಕರು ವಾಪಸ್ ಬೆಂಗಳೂರಿಗೆ ಬರದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಸೋಮವಾರ ಮತ್ತೆ 400 ಬಸ್​ಗಳು ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಂದ ಬರುತ್ತಿವೆ.

ಹೊರರಾಜ್ಯದ ನಿವಾಸಿಗಳಿಗೆ ಸಂಕಷ್ಟ

ಕೆಎಸ್​ಆರ್​ಟಿಸಿ ರಾಜ್ಯದೊಳಗಿನ ಕಾರ್ವಿುಕರಿಗೆ ಮಾತ್ರ ಬಸ್ ವ್ಯವಸ್ಥೆ ಮಾಡಿತ್ತು. ಆದರೆ, ಹೊರರಾಜ್ಯದ ಸಾವಿರಾರು ಕಾರ್ವಿುಕರು ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳಲ್ಲಿ ಕುಳಿತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೆ, ರೈಲ್ವೆಯಿಂದ ‘ಶ್ರಮಿಕ್’ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದರೂ, ಆ ರೈಲುಗಳು ಮಾಲೂರು ಮತ್ತು ಚಿಕ್ಕಬಾಣಾವಾರದಿಂದ ತೆರಳಿದವು. ಆ ಕುರಿತು ಮಾಹಿತಿಯಿಲ್ಲದ ಕಾರ್ವಿುಕರು ಮೆಜೆಸ್ಟಿಕ್​ನಲ್ಲಿ ರೈಲು ಮತ್ತು ಬಸ್​ಗಳಿಗಾಗಿ ಕಾಯುವಂತಾಗಿತ್ತು.

ಹದಿನೈದು ಸಾವಿರ ಕಾರ್ವಿುಕರ ಪ್ರಯಾಣ

ಭಾನುವಾರ ಒಂದೇ ದಿನ 500 ಬಸ್​ಗಳು ರಾಜ್ಯದ 20ಕ್ಕೂ ಹೆಚ್ಚಿನ ಜಿಲ್ಲೆಗಳತ್ತ ತೆರಳಿವೆ. ಪ್ರತಿ ಬಸ್​ನಲ್ಲಿ 30 ಜನರಂತೆ ಒಟ್ಟು 15 ಸಾವಿರ ಜನರು ಪ್ರಯಾಣಿಸಿದ್ದಾರೆ. ಕಾರ್ವಿುಕರ ಜತೆಗೆ ಇತರರಿಗೂ ಬಸ್​ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.

ಚಾಲಕರ ಸುರಕ್ಷತೆಗೆ ಆದ್ಯತೆ

ದೂರದ ಜಿಲ್ಲೆಗಳಿಗೆ ಪ್ರಯಾಣಿಸಿದ ಬಸ್​ಗಳಲ್ಲಿ ಇಬ್ಬರು ಚಾಲಕರನ್ನು ಕಳುಹಿಸಿಕೊಡಲಾಯಿತು. ಅದರಿಂದ ನಿರಂತರ ಬಸ್ ಚಾಲನೆಯಿಂದ ಚಾಲಕರಿಗೆ ಸಮಸ್ಯೆಯಾಗದಂತೆ ಮಾಡಲಾಗಿತ್ತು. ಜತೆಗೆ ಚಾಲಕರು ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.

ಬಸ್ ಹೊರಡುವ ಸ್ಥಳ ವಿಂಗಡಣೆ

ಬಸ್ ನಿಲ್ದಾಣದಲ್ಲಿ ಕಾರ್ವಿುಕರ ದಟ್ಟಣೆ ಕಡಿಮೆ ಮಾಡಲು ಸೋಮವಾರದಿಂದ ಕೆಎಸ್​ಆರ್​ಟಿಸಿ ಬಸ್ ಹೊರಡುವ ಸ್ಥಳ ಗಳನ್ನು ವಿಂಗಡಿಸಲಾಗಿದೆ. ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಯಾದಗಿರಿ ಕಡೆಗೆ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್​ಗಳು ಹೊರಡಲಿವೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಮಡಿಕೇರಿ, ಉಡುಪಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಬಸ್​ಗಳು ತೆರಳಲಿವೆ.

ಒಂದು ಬಸ್​ಗೆ ಮೂವತ್ತು ಜನ

ಪ್ರತಿ ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದರು. ಜತೆಗೆ, ಪ್ರತಿ ಪ್ರಯಾಣಿಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಇದನ್ನೂ ಓದಿ ರಾಜ್ಯದಲ್ಲಿ ಎಂಟು ಜನರಿಂದಲೇ ಹರಡಿದೆ ಶೇ.40 ಕರೊನಾ: ಪ್ರತಿಯೊಬ್ಬರ ಎಚ್ಚರಿಕೆಯೂ ಅವಶ್ಯಕ

ಖಾಸಗಿ ಸಂಸ್ಥೆ ಯಲ್ಲಿ ಕೆಲಸ ಮಾಡು ತ್ತಿದ್ದೆ. ಊರಲ್ಲಿ ಮನೆಯವರ ಆರೋಗ್ಯ ಸರಿಯಿಲ್ಲ. ಈಗ ಕೆಎಸ್​ಆರ್​ಟಿಸಿ ಬಸ್ ಸಂಚಾರ ಉಪಕಾರವಾದಂತಾಗಿದೆ.

| ಓಂಕಾರ್ ಬೀದರ್

ರಾಜಸ್ಥಾನ ದಿಂದ ಸಂಬಂಧಿಕರ ಮನೆಗೆ ಬಂದಿದ್ದೆ. ಇಲ್ಲಿಂದ ಮರಳಿ ಹೋಗಲು ಆಗುತ್ತಿಲ್ಲ. ರೈಲು ಸೇವೆಯೂ ಇಲ್ಲ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ!

| ಸಾನಿಕಾ ಜೋಧ್​ಪುರ

ಕರೊನಾ ಭೀತಿಗಿಂತ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ. 1 ತಿಂಗಳಿ ನಿಂದ ಆದಾಯವಿಲ್ಲ, ಸರಿಯಾಗಿ ಆಹಾರ ಸಿಗದೆ ಸಮಸ್ಯೆ ಅನುಭವಿಸಿದ್ದೇವೆ. ಈಗ ಊರಿಗೆ ಹೋಗುತ್ತಿರುವುದು ನೆಮ್ಮದಿ ತಂದಿದೆ.

| ಭೀಮಣ್ಣ ಯಾದಗಿರಿ

ಲಾಕ್​ಡೌನ್ ಆದಾಗಿನಿಂದ ಸರಿಯಾಗಿ ಊಟ ಮಾಡಿಲ್ಲ. ನಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಯಾರೋ ಕೊಟ್ಟ ಊಟ ಮಾಡುತ್ತ ಇಲ್ಲಿಯ ವರೆಗೆ ಜೀವನ ಸಾಗಿಸಿದೆವು. ಇನ್ನು ಊರಲ್ಲಿ ಜೀವನ ಸಾಗಿಸುತ್ತೇವೆ.

| ಮಹದೇವ್ ಯಾದಗಿರಿ

ಜನರನ್ನು ಸುರಕ್ಷಿತ ವಾಗಿ ಕಳುಹಿಸಿಕೊಡು ವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಕಾರ್ವಿುಕರ ಮಾಹಿತಿ ಪಡೆದು, ಅವರ ಊರುಗಳ ಕಡೆ ಹೊರಟ ಬಸ್​ಗಳಿಗೆ ಹತ್ತಿಸಲಾಗುತ್ತಿದೆ. ಅವರೆಲ್ಲರನ್ನು ಊರಿಗೆ ಕಳುಹಿಸಿದಾಗಲೇ ನಮಗೆ ನೆಮ್ಮದಿ.

| ಕೆ.ಆರ್. ರಂಗನಾಥ್ ಕೆಎಸ್​ಆರ್​ಟಿಸಿ ಟಿಸಿ