ನಗರದಲ್ಲಿ ಭಾನುವಾರ ರಾಷ್ರೀಯ ಸ್ವಯಂ ಸೇವಕ ಸಂಘದಿಂದ ಆಯೋಜಿಸಿದ್ದ ಪಥಸಂಚಲನ ಎಲ್ಲರ ಗಮನ ಸೆಳೆಯಿತು. 
ಜಿಲ್ಲೆ

ಎಲ್ಲರಲ್ಲೂ ರಾಷ್ಟ್ರೀಯ ಪ್ರಜ್ಞೆ ಬೆಳೆಯಲಿ

ಬೆಳಗಾವಿ: ಭಾರತದ ಪ್ರತಿಯೊಬ್ಬರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಯಬೇಕಿದೆ. ಮಾತಭೂಮಿ ಹಾಗೂ ಗೋವುಗಳನ್ನು ರಕ್ಷಿಸುವ ಕೆಲಸವಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಸಂಯುಕ್ತ ಮಹಾಮಂತ್ರಿ ಗೋಪಾಲ ಹೇಳಿದರು.

ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿಜಯದಶಮಿ ಪ್ರಯುಕ್ತ ಭಾನುವಾರ ಸಂಜೆ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಇನ್ನು ರಾಮರಾಜ್ಯ ನಿರ್ಮಾಣವಾಗಬೇಕಿದೆ. ಇಂದು ಮತಾಂತರದ ಮೂಲಕ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದೌರ್ಜನ್ಯ ಮೆರೆದವರ ಮೇಲೆ ಯಾವ ಕ್ರಮವಾಗುತ್ತಿಲ್ಲ. ಬಾಂಗ್ಲಾದೇಶದಲ್ಲೂ ಆಕ್ರಮಣ, ಅತ್ಯಾಚಾರ ನಡೆಯುತ್ತಿವೆ. ಅನ್ಯಾಯದ ವಿರುದ್ಧ ನಾವು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ದೇಶದಲ್ಲಿ ಆರ್‌ಎಸ್‌ಎಸ್ ಸಾಮರಸ್ಯ, ಬಂಧುತ್ವ ಮತ್ತು ಸಂಸ್ಕೃತಿ ಬೆಳೆಸುವ ಕೆಲಸ ಮಾಡುತ್ತಿದೆ. ಬಂಧುತ್ವದ ಮೂಲಕವೇ ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರವಾಗಿಸಬೇಕಿದೆ ಎಂದರು.

ಇದಕ್ಕೂ ಮೊದಲು ನಗರದಲ್ಲಿ ಪಥಸಂಚಲನ ನಡೆಯಿತು. ನಗರದ ಸರ್ದಾರ್ ಮೈದಾನದಿಂದ ಪಥ ಸಂಚಲನ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಸಾಗಿ ಚವಾಟ ಗಲ್ಲಿ, ಖಡಕಗಲ್ಲಿ, ಕಾಕತಿವೇಸ್ ರಸ್ತೆ ಮೂಲಕ ಲಿಂಗರಾಜ ದೇಸಾಯಿ ವೃತ್ತ ಮಾರ್ಗವಾಗಿ ಸಾಗಿ ಲಿಂಗರಾಜ ಕಾಲೇಜು ಮೈದಾನದಲ್ಲಿ ಸಮಾರೋಪಗೊಂಡಿತು. ಶಾಸಕ ಅಭಯ ಪಾಟೀಲ, ಎಂ.ವೈ.ಹಾರೂಗೇರಿ ಇತರರಿದ್ದರು.