ಐನಾಪುರ ಪಟ್ಟಣದಲ್ಲಿ ಲಾಕ್‌ಡೌನ್‌ನಿಂದಾಗಿ ಅಂಗಡಿಗಳ ಬಾಗಿಲು ಮುಚ್ಚಿರುವುದು. 
ಜಿಲ್ಲೆ

ಐನಾಪುರದಲ್ಲಿ ಸ್ವಯಂಘೋಷಿತ ಲಾಕ್‌ಡೌನ್

ಐನಾಪುರ: ಪಟ್ಟಣದಲ್ಲಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿರುವುದರಿಂದ ಭೀತಿಗೊಳಗಾಗಿರುವ ಪಟ್ಟಣದ ಜನರು ಸೆ.3ರಿಂದ ಒಂದು ವಾರದವರೆಗೆ ಸ್ವಯಂಘೋಷಿತವಾಗಿ ಲಾಕ್‌ಡೌನ್ ಪಾಲಿಸುತ್ತಿದ್ದಾರೆ.

ಗುರುವಾರ ಮುಖಂಡರು ಸಭೆ ಸೇರಿ ಪಟ್ಟಣವನ್ನು ಸ್ವಯಂ ಘೋಷಿತವಾಗಿ ಲಾಕ್‌ಡೌನ್ ಮಾಡುವ ನಿರ್ಣಯ ಕೈಗೊಂಡಿದ್ದರು. ಅದರಂತೆ ಗುರುವಾರದಿಂದ 8 ದಿನಗಳ ಕಾಲ ಸಂಪೂರ್ಣ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ.

ಕಳೆದ 6 ತಿಂಗಳಿಂದ ಕರೊನಾ ಹಾವಳಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಇತ್ತೀಚಿಗೆ ಸರ್ಕಾರವೂ ಕೂಡ ಹಾಕಿರುವ ಎಲ್ಲ ನಿರ್ಬಂಧ ತೆಗೆದಿರುವುದರಿಂದ ಮತ್ತಷ್ಟು ಕರೊನಾ ಹರಡಲು ಕಾರಣವಾಗಿದೆ ಎನ್ನಲಾಗಿದೆ.

ಕರೊನಾ ಪ್ರಕರಣಗಳಿಂದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನೆರೆಯ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಗವಾಡ ತಾಲೂಕಿನ ಕಾಗವಾಡ ಶಿರಗುಪ್ಪಿ, ಜುಗೂಳ, ಐನಾಪುರ, ಉಗಾರ, ಮಂಗಸೂಳಿ, ಕುಸನಾಳ ಸೇರಿ ಹಲವು ಗ್ರಾಮಗಳಲ್ಲಿ ಇಂದಿಗೂ ಕೂಡ ಕರೊನಾ ರಣಕೇಕೆ ಹಾಕುತ್ತಿದೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ತಾಲೂಕಿನ ಹಲವು ಜನರು ಕರೊನಾಗೆ ಬಲಿಯಾಗಿದ್ದಾರೆ. ಇದೆಲ್ಲವನ್ನು ಕಂಡ ಐನಾಪುರ ಪಟ್ಟಣದ ಸಾರ್ವಜನಿಕರು ಸೋಂಕಿತರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ ಎಂದು ತಿಳಿದು ಲಾಕ್‌ಡೌನ್ ನಿರ್ಣಯ ಕೈಗೊಂಡಿದ್ದಾರೆ. 8 ದಿನಗಳಿಗೆ ಬೇಕಾಗುವ ದಿನಸಿ ಸಾಮಗ್ರಿ ಖರೀದಿಸಿ ಇಟ್ಟುಕೊಳ್ಳಬೇಕು.

ಸುರಕ್ಷತೆಯ ದೃಷ್ಟಿಯಿಂದ 8 ದಿನ ಯಾರೂ ಬೇರೆ ಊರುಗಳಿಗೆ ಹೋಗುವುದಾಗಲಿ ಅಥವಾ ಬೇರೆ ಸ್ಥಳಗಳಿಂದ ಬರುವವರನ್ನು ಪಟ್ಟಣಕ್ಕೆ ಸೇರಿಸಿಕೊಳ್ಳದಂತೆ ಮುಖಂಡರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.