ಜಿಲ್ಲೆ

ಜೂನ್​ ಅಂತ್ಯಕ್ಕೆ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು; ಅಂತಿಮ ಹಂತದ ಕೆಲಸ ಕಾರ್ಯಕ್ಕೆ ವೇಗ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಪ್ರಾರಂಭವಾಗುವ ಹಂತಕ್ಕೆ ತಲುಪಿದೆ. ಜೂನ್​ ಅಂತ್ಯಕ್ಕೆ ಕುಡಿಯುವ ನೀರು ಪೂರೈಸಲು ಬೆಂಗಳೂರು ಜಲಮಂಡಳಿ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದು, ಈ ಮೂಲಕ ನಿವಾಸಿಗಳ ಬಹುದಿನಗಳ ಕನಸು ನನಸಾಗಲಿದೆ.

'ಯೋಜನೆ ಅನುಷ್ಠಾನಗೊಳಿಸಲು ಬೇಕಾಗಿರು ಪೈಪ್​ಲೈನ್​ ಕಾಮಗಾರಿ ಮುಗಿದಿದ್ದು, ನೀರಿನ ಸೋರಿಕೆ ಪರೀಸಲು ಆರಂಭಿಸಿದ್ದ ಹೈಡ್ರೊ ಪರೀಕ್ಷೆ ಸದ್ಯ ಅಂತಿಮ ಹಂತದಲ್ಲಿದೆ. ಜತೆಗೆ ವಾಲ್​ ಫಿಟ್ಟಿಂಗ್​ ಕೆಲಸಗಳೂ ನಡೆಯುತ್ತಿವೆ. ಜೂನ್​ ಎರಡನೇ ವಾರದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ, ಪರೀಸಲಾಗುತ್ತದೆ. ಬಳಿಕ ಜೈಕಾ ಸಂಸ್ಥೆಯಿಂದ ವರದಿ ಪಡೆದುಕೊಳ್ಳಲಾಗುತ್ತದೆ. ನಂತರ ಪರಿಸ್ಥಿತಿ ಅವಲೋಕಿಸಿ ಜೂನ್​ ಅಂತ್ಯದಿಂದ 110 ಗ್ರಾಮಗಳಿಗೆ ಕಾವೇರಿ ನೀರು ಸರಬರಾಜು ಆರಂಭಿಸಲಾಗುತ್ತದೆ' ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮ್​ ಪ್ರಸಾತ್​ ಮನೋಹರ್​ ಪ್ರತಿಕ್ರಿಯಿಸಿದ್ದಾರೆ.

ಸದ್ಯ ನಗರಕ್ಕೆ ನಿತ್ಯ 1,450 ಎಂಎಲ್​ಡಿ ಕಾವೇರಿ ನೀರು ಪೂರೈಸುತ್ತಿರುವ ಜಲಮಂಡಳಿ, ಕಾವೇರಿ 5ನೇ ಹಂತದ ಕಾಮಗಾರಿ ಮುಗಿಸಿ ಮೇ ಅಂತ್ಯಕ್ಕೆ 110 ಗ್ರಾಮಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿತ್ತು. 2019ರಲ್ಲಿ ಆರಂಭವಾದ ಈ ಯೋಜನೆಗೆ 36 ತಿಂಗಳ ಗಡುವು ನಿರ್ಧರಿಸಲಾಗಿತ್ತು. ಆದರೆ ಕರೊನಾ, ಕಾಮಗಾರಿ ಕುಂಠಿತ, ಬರಗಾಲ ಸೇರಿ ಹಲವು ಅಡೆತಡೆಗಳು ಎದುರಾದ ಪರಿಣಾಮ ಭರವಸೆ ನೀಡಿದ ಸಮಯಕ್ಕೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಇದೀಗ ಕಾಮಗಾರಿ ಅಂತಿಮ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, 110 ಗ್ರಾಮಗಳಲ್ಲಿ ಕಾವೇರಿ ಸಂಪರ್ಕಕ್ಕೆ ನೋಂದಾಣಿ ಪ್ರಕ್ರಿಯೆಯೂ ನಡೆಯುತ್ತಿದೆ.

ಯೋಜನೆ ಕಾರ್ಯರಂಭದಿಂದಾಗಿ ಮಹದೇವಪುರ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಕೆ.ಆರ್​.ಪುರ ಹಾಗೂ ಬ್ಯಾಟರಾಯನಪುರ ವ್ಯಾಪ್ತಿಯ ಗ್ರಾಮದ ನಿವಾಸಿಗಳಿಗೆ ನೀರು ಸರಬರಾಜಾಗುತ್ತದೆ.

ಕಾವೇರಿ 5 ನೇ ಹಂತದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಜೂನ್​ 2ನೇ ವಾರಕ್ಕೆ ಎಲ್ಲವೂ ಪೂರ್ಣಗೊಳ್ಳುತ್ತವೆ. ಈ ಯೋಜನೆಯಿಂದ ನಗರಕ್ಕೆ 750 ಎಂಎಲ್​ಡಿ ಯಷ್ಟು ಹೆಚ್ಚಿನ ನೀರು ಲಭ್ಯವಾಗಲಿದೆ. ಇದನ್ನ ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
-ಡಾ.ವಿ.ರಾಮ್​ ಪ್ರಸಾತ್​ ಮನೋಹರ್​, ಅಧ್ಯಕ್ಷ, ಜಲಮಂಡಳಿ