ಕಾರಟಗಿಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ನರಸಪ್ಪ ಮಾತನಾಡಿದರು. 
ಜಿಲ್ಲೆ

ಅಶುದ್ಧ ನೀರು ಪೂರೈಕೆ ನಿಯಂತ್ರಿಸಿ: ತಾಪಂ ಇಒ ನರಸಪ್ಪ ಸೂಚನೆ

Gangavati - Desk - Veeresh S Ullagaddi

ಕಾರಟಗಿ: ಅನಾರೋಗ್ಯಕ್ಕೆ ಕಾರಣವಾಗುವ ಅಶುದ್ಧ ಕುಡಿವ ನೀರು ಪೂರೈಕೆಯಾಗದಂತೆ ಎಚ್ಚರವಹಿಸಬೇಕು ಎಂದು ತಾಪಂ ಇಒ ನರಸಪ್ಪ ಎನ್. ಅಧಿಕಾರಿಗಳಿಗೆ ಸೂಚಿಸಿದರು.

ಸಮಸ್ಯೆ ಕಂಡುಬಂದ ನೀರು ಸರಬರಾಜು ಪೈಪ್‌ಲೈನ್ ಸರಿಪಡಿಸಿ

ಪಟ್ಟಣದ ವಿಶೇಷ ಎಪಿಎಂಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ, ಜಲ ಜೀವನ್ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದರು.ಜಿಲ್ಲೆಯ ವಿವಿಧೆಡೆ ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಪ್ರಕರಣಗಳು ಹೆಚ್ಚುತ್ತಿವೆ. ಕುಡಿವ ನೀರು ಸರಬರಾಜು ಪೈಪ್‌ಲೈನ್ ದುಸ್ಥಿತಿಯಲ್ಲಿದ್ದರೆ, ಪಿಡಿಒ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಬೇಕು. ಸಮಸ್ಯೆ ಕಂಡುಬಂದ ನೀರು ಸರಬರಾಜು ಪೈಪ್‌ಲೈನ್ ಸರಿಪಡಿಸಿ, ನೀರಿನ ಮೂಲಗಳು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ನೀರಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು

ನೀರಿನ ತೊಟ್ಟಿ, ಟ್ಯಾಂಕ್ ಸ್ವಚ್ಛಗೊಳಿಸಿ, ಒಣಗಿಸಿದ ಬಳಿಕ ನೀರು ಪೂರೈಕೆ ಮಾಡಬೇಕು. ನೀರಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ. ವಾರ್ಡ್‌ನ ಪ್ರತಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮವಹಿಸಬೇಕು ಎಂದು ಹೇಳಿದರು.
ತಾಪಂ ಯೋಜನಾಧಿಕಾರಿ ರಾಘವೇಂದ್ರ, ಉಪತಹಸೀಲ್ದಾರ್ ಉಮಾ ಮಹೇಶ್, ಕಿರಿಯ ಎಂಜಿನಿಯರ್ ಸಿದ್ದಪ್ಪ, ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಇದ್ದರು.

ಕಲುಷಿತ ನೀರು ಪೂರೈಕೆಯಾಗುವ ಮಾಹಿತಿಯನ್ನು ಸಂಗ್ರಹಿಸಿ, ಆ ಸ್ಥಳಕ್ಕೆ ಪಿಡಿಒ, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕುಡಿಯಲು ಯೋಗ್ಯವಾದ ನೀರು ಸೇವಿಸುವಂತೆ ಗ್ರಾಮಸ್ಥರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ.ನರಸಪ್ಪ ಎನ್.ತಾಪಂ ಇಒ


ಕುಡಿವ ನೀರಿನ ಸ್ಯಾಂಪಲ್ ಸಂಗ್ರಹಿಸಿ

ಗುಣಮಟ್ಟದ ನೀರು ಸರಬರಾಜು ಮಾಡಲು ಆದ್ಯತೆ ನೀಡಿ, ನೀರಿನ ಗುಣಮಟ್ಟ ಪ್ರಮಾಣ ತಿಳಿಯಬೇಕು. ಪ್ರತಿ ಗ್ರಾಮಗಳಿಗೆ ಪೂರೈಕೆ ಮಾಡುವ ನೀರಿನ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸಬೇಕು ಎಂದು ತಾಪಂ ಇಒ ನರಸಪ್ಪ ಹೇಳಿದರು. ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಪೂರೈಕೆ ಮಾಡಬೇಕು. ಶುದ್ಧ ಕುಡಿವ ನೀರಿನ ಘಟಕಕ್ಕೆ ಭೇಟಿ ನೀಡಿ, ಜನರಿಗೆ ಪೂರೈಕೆ ಮಾಡುತ್ತಿರುವ ನೀರಿನ ತಪಾಸಣೆ ವರದಿಯನ್ನು ತಾಪಂಗೆ ಸಲ್ಲಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಹಾಗೂ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಸರಬರಾಜು ಕುರಿತು ಮಾಹಿತಿ ಪಡೆದು, ತೊಂದರೆ ಕಂಡುಬಂದಲ್ಲಿ ಕ್ರಮಕ್ಕೆ ಮುಂದಾಗಬೇಕು ಎಂದರು.