ಸೋಮವಾರಪೇಟೆ : ಕ್ರೀಡೆ ಮತ್ತು ಕಲಿಕೆ ನಾಣ್ಯದ ಮುಖಗಳಿದ್ದಂತೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪಾಲಕರ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಿಂದ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಅರೋಗ್ಯ ಹೆಚ್ಚುತ್ತದೆ. ಉತ್ತಮ ಆರೋಗ್ಯವಿದ್ದರೆ ಕಲಿಕೆಗೆ ಉಪಯೋಗವಾಗುತ್ತದೆ. ಪಾಲಕರು ಕೂಡ ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕ್ರೀಡೆ ಎಂಬುದು ಕೊಡಗಿನ ಜನರ ರಕ್ತದಲ್ಲೇ ಬಂದಿದೆ. ಕೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಅನೇಕರು ಉತ್ತಮ ಹುದ್ದೆಯನ್ನು ಪಡೆದಿದ್ದಾರೆ. ಸೋಮವಾರಪೇಟೆ ತಾಲೂಕಿನ ಅನೇಕ ಪ್ರತಿಭೆಗಳು ಹಾಕಿ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದ್ದಾರೆ. ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಜನಪ್ರತಿನಿಧಿಗಳು ಕೂಡ ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ನಿರಂತರ ಸಹಕಾರ ನೀಡಬೇಕು. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಪಣ ತೊಟ್ಟಿರುವ ಒಕ್ಕಲಿಗರ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮೈಸೂರು ನೇಗಿಲಯೋಗಿ ಟ್ರಸ್ಟ್‌ನ ಅಧ್ಯಕ್ಷ ಡಾ.ಡಿ.ರವಿಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ನಂತರ ಮಕ್ಕಳಿಗೆ ಬೇಡಿಕೆಯಿರುವ ಕೋರ್ಸ್‌ಗಳನ್ನು ಕೊಡಿಸಬೇಕು. ಮಕ್ಕಳು ಮೊಬೈಲ್, ಟಿವಿಯಿಂದ ದೂರವಿರಬೇಕು. ಪಾಲಕರು ಮಕ್ಕಳು ಓದುವಾಗ ಟಿವಿಯಲ್ಲಿ ಸಿರಿಯಲ್ ನೋಡುತ್ತಾ, ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತ ಕುಳಿತರೆ, ಅದನ್ನೇ ಮಕ್ಕಳು ಕಲಿಯುತ್ತಾರೆ. ಪಾಲಕರು ಬದಲಾದರೆ ಮಕ್ಕಳನ್ನು ಬದಲಾಯಿಸಬಹುದು ಎಂದರು.
ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯನ್ನು ಕಲಿಯಲೇಬೇಕು. ತಾವು ತೆಗೆದುಕೊಂಡ ವಿಷಯದಲ್ಲಿ ಉನ್ನತ ಶಿಕ್ಷಣ ಪೂರೈಸಿದರೆ ಪ್ರತಿಯೊಬ್ಬರಿಗೂ ನೌಕರಿ ಸಿಗುತ್ತದೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಉಪಾಧ್ಯಕ್ಷ ಎಸ್.ಬಿ.ಭರತ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ವಿದ್ಯಾಸಂಸ್ಥೆಯ ಭಾತ್ಮಿದಾರ ಕೆ.ಎಂ.ಜಗದೀಶ್, ಸಂಘದ ಪದಾಧಿಕಾರಿಗಳಾದ ಎನ್.ಬಿ.ಗಣಪತಿ, ನಂದಕುಮಾರ್, ಲಿಂಗರಾಜು, ನೇಗಿಲಯೋಗಿ ಟ್ರಸ್ಟ್‌ನ ಶೋಭ ರಮೇಶ್, ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಇದ್ದರು.
ಪಾಲಕರು ಮತ್ತು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.