ಜಿಲ್ಲೆ

ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ ವೃದ್ಧಿ

ಶಾಸಕ ಕೆ.ಷಡಕ್ಷರಿ ಹೇಳಿಕೆ | ಒಂದು ದಿನದ ಕಾರ್ಯಾಗಾರ ಉದ್ಘಾಟನೆ

 ತಿಪಟೂರು: ಮನುಷ್ಯ, ಆದಿ ಮಾನವನಿಂದ ಆಧುನಿಕ ಮಾನವನವರೆಗೆ ಬದಲಾಗಿದ್ದು ಇದಕ್ಕೆ ತಕ್ಕಂತೆ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ ಹಾಗೂ ನಗರಸಭೆ ಆಶ್ರಯದಲ್ಲಿ ವಿಶ್ವ ಆಹಾರ ದಿನದ ಪ್ರಯುಕ್ತ ಶುಕ್ರವಾರ ಪೌರ ಕಾರ್ಮಿಕರಿಗೆ ಹಾಗೂ * ನೀರಗಂಟಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಮಾನವ ಪೌಷ್ಟಿಕತೆ, ವಿಜ್ಞಾನ ಮತ್ತು ಆರೋಗ್ಯದ ಆಧಾರದಲ್ಲಿ ಆಹಾರವನ್ನು ಆಯ್ಕೆ ಮಾಡುತ್ತಿದ್ದಾನೆ. ಈ ನಿಟ್ಟಿನಲ್ಲಿ, ಉತ್ತಮ ಆಹಾರ ಮತ್ತು ಭವಿಷ್ಯಕ್ಕಾಗಿ ಕೈ ಜೋಡಿಸಿ ಎಂಬ ಘೋಷವಾಕ್ಯದಲ್ಲಿ ವಿಶ್ವ ಆಹಾರ ದಿನಾಚರಣೆ ಆಯೋಜಿಸಲಾಗಿದೆ. ಅದಿ ಮಾನವರ ಕಾಲದಲ್ಲಿ ಆಹಾರ ಪಡೆಯುವುದು ಬದುಕಿನ ಕಠಿಣ ಹೋರಾಟವಾಗಿತ್ತು. ಆದರೆ ಇಂದಿನ ಕಾಲದಲ್ಲಿ ಪೌಷ್ಟಿಕ ಆಹಾರ ದೊರೆಯುವಾಗಲೂ ನಾವು ಅಸಮತೋಲನ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ ಎಂದರು.

ನಗರಸಭೆ ಪ್ರಭಾರ ಅಧ್ಯಕ್ಷೆ ಮೇಘಶ್ರೀ ಎಸ್​.ಭೂಷಣ್​ ಮಾತನಾಡಿ, ಒಂದು ದೇಶ ಅಭಿವೃದ್ಧಿಯಾಗಿದೆಂದರೆ ಅಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮೂರು ಹೊತ್ತು ನಿಯಮಿತವಾಗಿ ಆಹಾರ ಸೇವಿಸುತ್ತಿದ್ದಾನೆ ಎಂದರ್ಥ. ಈ ಮಾನದಂಡದಲ್ಲಿ ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ. ದೇಶದ ಸಂಸತಿಯಲ್ಲಿ ಆಹಾರವನ್ನು ದೇವರ ಪ್ರಸಾದದ ರೀತಿಯಲ್ಲಿ ಸೇವನೆ ಮಾಡುತ್ತೇವೆ. ನಮ್ಮ ಆಹಾರ ಪದ್ಧತಿ ನಮ್ಮ ಆರೋಗ್ಯ ನಿರ್ಧರಿಸುತ್ತದೆ ಎಂದರು.

ಜಿಕೆವಿಕೆಯ ವಿಸ್ತರಣಾ ನಿರ್ದೇಶಕ ವೈ.ಎನ್​.ಶಿವಲಿಂಗಯ್ಯ ಪೌಷ್ಟಿಕ ಆಹಾರದ ಅಗತ್ಯತೆ, ಆಹಾರದ ಗುಣಮಟ್ಟ ಮತ್ತು ಪೌಷ್ಟಿಕ ಬೆಳೆಗಳ ಬೆಳವಣಿಗೆ ಕುರಿತು ಉಪನ್ಯಾಸ ನೀಡಿ, ಮನುಷ್ಯನ ಬೆಳವಣಿಗೆಯ ಹಾದಿಯಲ್ಲಿ ಆಹಾರದ ಗುಣಮಟ್ಟವೇ ಅವನ ಬುದ್ಧಿ ಮತ್ತು ಆರೋಗ್ಯವನ್ನು ನಿರ್ಧರಿಸಿದೆ. ಮನುಷ್ಯನು ಸಾಮಾಜಿಕ ಜವಾಬ್ದಾರಿ ಅರಿತು ಆಹಾರ, ಆರೋಗ್ಯ ಭದ್ರತೆ ಬಹುಮುಖ್ಯವಾಗಿ ಕಾಪಾಡಿಕೊಳ್ಳಬೇಕಾಗಿದ್ದು, ಭೂಮಿಯನ್ನು ಮಲಿನ ಮಾಡದಂತೆ ಪ್ಲಾಸ್ಟಿಕ್​ ಮುಕ್ತವಾಗಿಡಬೇಕಾದ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ ಎಂದರು.

ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಬಿತ್ತಿಪತ್ರಗಳನ್ನು ಶಾಸಕರು ಬಿಡುಗಡೆ ಮಾಡಿದರು. ಜಿಕೆವಿಕೆಯ ವಿಸ್ತರಣಾಧಿಕಾರಿ ವೈ.ಎನ್​.ಶಿವಲಿಂಗಯ್ಯ, ಕೆವಿಕೆ ಮುಖ್ಯಸ್ಥ ಎಂ.ಎಚ್​.ಶಂಕರ್​, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್​.ಯೋಗೀಶ್​, ಪೌರಯುಕ್ತ ವಿಶ್ವೇಶ್ವರ ಬದರಗಡೆ, ವಿಜ್ಞಾನಿ ದರ್ಶನ್​, ಆರ್ಥಿಕ ಸಾಕ್ಷರತಾ ಸಮಾಲೋಚಕಿ ರೇಖಾ, ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಜಿಕೆವಿಕೆಯ ವಿದ್ಯಾರ್ಥಿಗಳು ಇದ್ದರು.