ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವನ್ನು ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ವಿ.ಸಿ.ಉಮಾಶಂಕರ್, ಟಿ.ಸಿ.ವಸಂತ ನಿಂಗೇಗೌಡ, ಯೋಗೇಶ್‌ಕನ್ಯಾಡಿ, ಪ್ರತಿಭಾ, ತೇಜಾವತಿ ಇತರರು ಇದ್ದರು. 
ಜಿಲ್ಲೆ

ಧರ್ಮಸ್ಥಳ ಸಂಸ್ಥೆಯಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆ

ಮದ್ದೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಕುಣಿಗಲ್ ಅರೆಶಂಕರ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಭಾನುವಾರ ತಾಲೂಕಿನ ವಳೆಗೆರೆಹಳ್ಳಿಯ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮತನಾಡಿದರು.

ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆ ನಿಟ್ಟಿನಲ್ಲಿ ಮಹಿಳೆಯರನ್ನು ಒಳಗೊಂಡಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳಿಂದ ಹಲವು ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಡಾ.ವೀರೇಂದ್ರ ಹೆಗ್ಗಡೆ ಅವರು ಕೆರೆ, ಕಟ್ಟೆಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಪುರಾತನ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಸ್ವಚ್ಛತೆ, ದುಶ್ಚಟ ಬಿಡಿಸುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳು ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಿಜಕ್ಕೂ ಮೆಚ್ಚುವ ಸಂಗತಿ ಎಂದರು.

ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜತೆಗೆ ಅವರಿಗೆ ಉತ್ತಮ ಆಚಾರ, ವಿಚಾರ, ಗುರು, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಕಲಿಸುವುದರಿಂದ ಒಳ್ಳೆಯ ಮಾನವರನ್ನಾಗಿ ರೂಪಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್, ಡಾ.ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಂದು ಸರ್ಕಾರ ಜನರಿಗೆ ಹಾಗೂ ಸಮಾಜಕ್ಕೆ ಮಾಡಬಹುದಾದ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡುತ್ತಿರುವುದು ಮೆಚ್ಚುಗೆಯ ವಿಷಯ. ಮುಂದೆಯೂ ಹತ್ತು ಹಲವು ಜನಪರ ಯೋಜನೆಗಳನ್ನು ಮುಂದುವರೆಸಿಕೊಂಡು ಸಮಾಜದ ಎಲ್ಲಾ ವರ್ಗದ ಜನರಿಗೂ ಅನುಕೂಲ ಕಲ್ಪಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಅಲ್ಲದೆ ವಳಗೆರೆಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಟಿ.ಸಿ.ವಸಂತ ನಿಂಗೇಗೌಡ, ಸಂಸ್ಥೆಯ ಯೋಜನಾಧಿಕಾರಿ ಯೋಗೇಶ್‌ಕನ್ಯಾಡಿ, ಸಂಸ್ಥೆಯ ಮೇಲ್ವಿಚಾರಕಿ ಪ್ರತಿಭಾ ಹಾಗೂ ತೇಜಾವತಿ, ಸವಿತಾ, ಉಮಾ ಇತರರು ಇದ್ದರು.