ಜಿಲ್ಲೆ

ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ

ಬೀರೂರು: ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮನಸ್ಸು, ದೇಹವನ್ನು ಸಮೀಕರಿಸಿ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯಗಳನ್ನು ಗಟ್ಟಿಗೊಳಿಸುವ ಮತ್ತು ಮನುಷ್ಯನ ಜೀವನವನ್ನು ಉಲ್ಲಾಸದಾಯಕವಾಗಿಡುವುದೇ ಯೋಗ ಎಂದು ಪಟ್ಟಣದ ರಂಭಾಪುರಿ ಖಾಸಾಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕೆ.ಎಲ್.ಕೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಆರೋಗ್ಯಧಾಮ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಯೋಜಿಸಿದ್ದ ಉಚಿತ ಯೋಗ ಸಪ್ತಾಹ ಶಿಬಿರ ಉದ್ಘಾಟಿಸಿ ಮಾತನಾಡಿ, ಒತ್ತಡದ ಬದುಕಿನ ಸವಾಲುಗಳನ್ನು ಎದುರಿಸುವ ಭರದಲ್ಲಿ ಗಳಿಕೆಯಲ್ಲಿ ಹೆಚ್ಚಿನ ಹಣವನ್ನು ಮಾತ್ರೆ, ವೈದ್ಯರಿಗೆ ನೀಡಲಾಗುತ್ತಿದೆ. ಉಚಿತವಾಗಿ ದೊರಕುವ ಆರೋಗ್ಯರಕ್ಷಣೆ ಸೂತ್ರಗಳನ್ನು ಪಾಲಿಸಲು ನಿರ್ಲಕ್ಷ ವಹಿಸುತ್ತಿರುವುದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ಮೇಲೆ ಪರಿಣಾಮ ಬೀರಲಿದೆ ಎಂದರು.

ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಆರೋಗ್ಯಧಾಮ ಯೋಗಕೇಂದ್ರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಗುಪ್ತಾ, ನಿವೃತ್ತ ಶಿಕ್ಷಕ ಎಂ.ಮಲ್ಲಪ್ಪ, ಯೋಗ ಶಿಕ್ಷಕಿ ಸಿತಾರಾ, ಡಾ.ಬಿರಾದಾರ್, ಸವಿತಾ ರಮೇಶ್, ಶ್ರೀ ನಿವಾಸ್, ಸಂಪತ್‌ಕುಮಾರ್, ಪ್ರದೀಪ್, ಹನುಮಂತ ರಾಜು, ನಟರಾಜ್, ಅಶೋಕ್ ಇದ್ದರು.