ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ನಿಯೋಗವು ನಗರದ ಡ್ರೈನೇಜ್ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಸುದ್ದಿಗೋಷ್ಠಿ ನಡೆಸಿದರು. ಅಧ್ಯಕ್ಷ, ಶಾಸಕ ಟಿ. ರಘುಮೂರ್ತಿ, ಶಾಸಕರುಗಳಾದ ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು ಇದ್ದರು.
- ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷ ಟಿ. ರಘುಮೂರ್ತಿ ಕಳವಳ
- 1,250 ಕೋಟಿ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಡಿಸುತ್ತೇವೆ
- ಶಾಸಕರುಗಳಾದ ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು ಇದ್ದರು.
ಮಂಗಳೂರು: ನಾವು ಕಂಡಂತೆ ಮಂಗಳೂರು ನಗರದಲ್ಲಿ ಯುಜಿಡಿ (ಒಳಚರಂಡಿ) ಕಾಮಗಾರಿಗಳು ಸಮರ್ಪಕವಾಗಿಲ್ಲ. ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿರುವ ರೂ. 1,250 ಕೋಟಿ ಒಳಚರಂಡಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಮುಂದಿನ ವಿಧಾನಸಭೆಯಲ್ಲಿ ವರದಿ ಮಂಡಿಸಲಿದ್ದೇವೆ ಎಂದು ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷ, ಶಾಸಕ ಟಿ. ರಘುಮೂರ್ತಿ ಹೇಳಿದರು.
ಅವರ ನಿಯೋಗವು ಬುಧವಾರ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ವತಿಯಿಂದ ಕೈಗೊಂಡ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗಳೂರಿಗೆ ನಗರದ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟಾಗ ನದಿ, ಕಾಲುವೆಗಳಲ್ಲಿ ಡ್ರೈನೇಜ್ ನೀರು ಹರಿಯುತ್ತಿರುವುದು ಮತ್ತು ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿದ್ದೇವೆ. ಡ್ರೈನೇಜ್ ಸಮಸ್ಯೆ ನಿವಾರಣೆಗಾಗಿ ಕಾಮಗಾರಿಗಳು ನಡೆಯಲೇಬೇಕಿದೆ. ಅನುದಾನ ಬಿಡುಗಡೆಗೆ ನಮ್ಮ ಸಮಿತಿಯೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಿದೆ. ಮುಂದಿನ ಅಧಿವೇಶನದಲ್ಲೇ ಮಧ್ಯಂತರ ವರದಿ ಮಂಡಿಸುತ್ತೇವೆ ಎಂದರು.
ಡ್ರೈನೇಜ್‌ಗೆ ಸಂಬಂಧಿಸಿ ನಗರದಲ್ಲಿ ಇದುವರೆಗೆ ಕೆಯುಐಡಿಎಫ್‌ಸಿ ಮೂಲಕ ರೂ. 457 ಕೋಟಿಗಳ ಕಾಮಗಾರಿ ಆಗಿದೆ. ಸ್ಮಾರ್ಟ್ ಸಿಟಿಯೂ ರೂ. 990 ಕೋಟಿ ಖರ್ಚು ಮಾಡಿ 56 ಕಾಮಗಾರಿಗಳನ್ನು ನಡೆಸಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಪಾಲಿಕೆ ಸಲ್ಲಿಸಿರುವ ಒಳಚರಂಡಿ ಸಮಗ್ರ ಯೋಜನಾ ವರದಿಯ ರೂ. 1,250 ಕೋಟಿ ಪ್ರಸ್ತಾವನೆ ಜಾರಿಗೆ ಬರಬೇಕು. ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ.
ಉಡುಪಿಯಲ್ಲಿ ಅಂತಹ ಸಮಸ್ಯೆ ಇಲ್ಲ
ಉಡುಪಿಗೂ ಭೇಟಿ ಕೊಟ್ಟಿದ್ದೇವೆ. ಮಂಗಳೂರಿನಲ್ಲಿ ಇರುವಂತೆ ಇಲ್ಲಿ ಅಂತಹ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಅಲ್ಲಿ ಕುಡಿಯುವ ನೀರಿನ ಕಾಮಗಾರಿಗಳು ಶೇ. 90ರಷ್ಟು ಪೂರ್ಣಗೊಂಡಿದೆ. ಸಮಿತಿಯು ಪ್ರತಿ ಬುಧವಾರ ಬೆಂಗಳೂರಿನಲ್ಲಿ ನಡೆಸುವ ಸಭೆಯಲ್ಲಿ ಚರ್ಚೆ ನಡೆಸಿ ಭೇಟಿ ಸ್ಥಳಗಳನ್ನು ನಿಗದಿ ಮಾಡಿಕೊಳ್ಳುತ್ತೇವೆ ಎಂದರು.
ವಿಧಾನ ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯರು ಹಾಗೂ ಶಾಸಕರುಗಳಾದ ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು, ಜಿ.ಕೆ. ವೆಂಕಟಶಿವ ರೆಡ್ಡಿ, ಎಂ. ಕೃಷ್ಣಪ್ಪ, ಡಿ.ಜಿ. ಶಾಂತನಗೌಡ, ಎಸ್. ಮುನಿರಾಜು, ಟಿ.ಎನ್. ಜವರಾಯಿ ಗೌಡ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್, ಸ್ಮಾರ್ಟ್ ಸಿಟಿಯ ಅರುಣ್‌ಪ್ರಭಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಶೇ. 65ರಷ್ಟು ಮಾತ್ರ ಯುಜಿಡಿ
850 ಕಿ.ಮೀ. ಉದ್ದದಲ್ಲಿ ಡ್ರೈನೇಜ್ ಇದೆ. 25 ಸಾವಿರ ಯಂತ್ರೋಪಕರಣಗಳ ಅಗತ್ಯ ಇದೆ. 1961ರಲ್ಲಿ 250 ಕಿ.ಮೀ. ಉದ್ದದ ಡ್ರೈನೇಜ್ ಆಗಿತ್ತು. ಅವೆಲ್ಲ ಶಿಥಿಲವಾಗಿದೆ. ಅಲ್ಲಲ್ಲಿ ಪದೇಪದೇ ಲೀಕೇಜ್ ಕಾಣಿಸಿಕೊಳ್ಳುತ್ತಿದೆ. 2005ರಲ್ಲಿ 360 ಕಿ.ಮೀ. ಒಳಚರಂಡಿ ಜಾಲ ಇತ್ತು. 185 ಕಿ.ಮೀ. ಉನ್ನತೀಕರಣ ಮತ್ತು 180 ಕಿ.ಮೀ. ಹೊಸದಾಗಿ ಆಗಬೇಕಿದೆ. ಇದುವರೆಗೆ ಶೇ. 65ರಷ್ಟು ಮಾತ್ರ ಯುಜಿಡಿ ಕವರ್ ಆಗಿದೆ ಎಂದು ಸಮಿತಿಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ರವಿಚಂದ್ರ ಅವರು, ಈ ನಿಟ್ಟಿನಲ್ಲಿ ರೂ. 1,250 ಕೋಟಿ ಅನುದಾನ ಸಿಕ್ಕಿದರೆ ಸಮಸ್ಯೆಗೆ ಒಂದು ಹಂತದಲ್ಲಿ ಪರಿಹಾರ ಸಿಕ್ಕಂತಾಗುತ್ತದೆ. ಇದರಿಂದ ಸುಮಾರು 8 ಲಕ್ಷ ಜನರಿಗೆ ಉಪಯೋಗವಾಗುತ್ತದೆ. 2046ರ ವರೆಗಿನ ದೂರದೃಷ್ಟಿತ್ವ ಇಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದರು.