ಧಾರವಾಡ: ನಗರದ ಯಾಲಕ್ಕಿ ಶೆಟ್ಟರ ಕಾಲನಿಯ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಅಪರಾಧಿಗೆ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳು ಜೈಲುಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 2022ರ ಜ. 27ರಂದು ವಿನಾಯಕ ವೀರನಗೌಡ ಪಾಟೀಲ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ತನಿಖೆ ಕೈಗೊಂಡಿದ್ದ ವಿದ್ಯಾಗಿರಿ ಠಾಣೆ ಪೊಲೀಸರು ಅಣ್ಣಿಗೇರಿಯ ಗವಿಸಿದ್ದಪ್ಪ ಲಕ್ಷ್ಮಪ್ಪ ಕನಕೇರಿ ಎಂಬಾತನನ್ನು ಬಂಧಿಸಿ ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಈ ಕುರಿತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಧಾರವಾಡ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿ ಮಹೇಶ ಚಂದ್ರಕಾಂತ ಅವರು, ಅಪರಾಧಿಗೆ ಒಂದೂವರೆ ವರ್ಷ ಜೈಲುಶಿಕ್ಷೆ, 5,000 ರೂ. ದಂಡ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಹಿರಿಯ ಸಹಾಯಕ ಸರ್ಕಾರಿ ವಕೀಲ ಅನಿಲಕುಮಾರ ಆರ್. ತೊರವಿ ವಕಾಲತು ಮಂಡಿಸಿದ್ದರು.