ಜಿಲ್ಲೆ

ವೃದ್ಧೆಗೆ ದೌರ್ಜನ್ಯ ಅಪರಾಧಿಗೆ ಜೈಲು ಶಿಕ್ಷೆ: 10 ವರ್ಷ ಕಾರಾಗೃಹ ವಾಸ, 1.35 ಲಕ್ಷ ರೂ ದಂಡ

ಕೆ.ಎನ್.ರಾಘವೇಂದ್ರ

ಮಂಡ್ಯ: ವೃದ್ಧ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1.35 ಲಕ್ಷ ರೂ ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಬಿ.ದಿಲೀಪ್‌ಕುಮಾರ್ ತೀರ್ಪು ನೀಡಿದ್ದಾರೆ.

ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ರಾಗಿಮುದ್ದನಹಳ್ಳಿ ಬಡಾವಣೆಯ ನಿವಾಸಿ ದಿನೇಶ್(38) ಶಿಕ್ಷೆಗೊಳಗಾದ ಅಪರಾಧಿ. 2021ರ ಮಾ.10ರಂದು 80 ವರ್ಷದ ವೃದ್ಧ ಮಹಿಳೆ ರಾಗಿಮುದ್ದನಹಳ್ಳಿ-ಬೇಬಿ ಬೆಟ್ಟದ ರಸ್ತೆಯ ಪಕ್ಕದಲ್ಲಿರುವ ಗುಮ್ಮನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬರ್ಹಿದೆಸೆ ಮಾಡುತ್ತಿದ್ದಾಗ, ದಿನೇಶ್ ಆಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದನು. ಈ ಸಂಬಂಧ ಅಂದು ಪಾಂಡವಪುರ ಪಿಎಸ್‌ಐ ಆಗಿದ್ದ ಪೂಜಾ ಕುಂತೋಜಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಅವರು ಭಾದಂಸಂ 341, 323, 325, 354(ಎ), 354(ಬಿ), 378 ಐಪಿಸಿ ಕಾಯ್ದೆಯಡಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನೇಶ್‌ಗೆ ಶಿಕ್ಷೆ ವಿಧಿಸಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.