ವಿಜಯವಾಣಿ ಸುದ್ದಿಜಾಲ ಕಾರವಾರ
ಜಮೀನಿನ ವಿಷಯಕ್ಕಾಗಿ ತನ್ನ ಸಂಬಂಧಿಯನ್ನು ಕೊಲೆ ಮಾಡಿದ ವ್ಯಕ್ತಿಗೆ 7 ವರ್ಷದ ಕಠಿಣ ಶಿಕ್ಷೆಯೊಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಹೊನ್ನಾವರ ತಾಲೂಕಿನ ಮಂಕಿ ಠಾಣೆಯ ವ್ಯಾಪ್ತಿಯ ಉಮೇಶ ಲಕ್ಷ್ಮಣ ನಾಯ್ಕ ಶಿಕ್ಷೆಗೊಳಗಾದ ವ್ಯಕ್ತಿ. 2018 ರ ಆಗಸ್ಟ್ 20 ರಂದು ಮಹಾಬಲೇಶ್ವರ ನಾಯ್ಕ ಎಂಬುವವರನ್ನು ಎಳನೀರು ಕಡಿಯುವ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ತಪ್ಪಿಸಲು ಬಂದ ರಮಾ ಮಹಾಬಲೇಶ್ವರ ನಾಯ್ಕ ಅವರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದ. ಅಕ್ಕಪಕ್ಕದ ಜನರಿಗೆ ಜೀವ ಬೆದರಿಕೆ ಹಾಕಿದ್ದ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಅಪರಾಧಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ವಿವೀಧ ದಂಡಸಂಹಿತೆಯಡಿ ಒಟ್ಟು 32 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ ಶಿಕ್ಷೆ ಅನುಭವಿಸಬೇಕು ಎಂದು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ತನುಜಾ ಹೊಸಪಟ್ಟಣ ಹಾಗೂ ಪ್ರಭಾರ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು.