ಬೆಳಗಾವಿ: ಕಾನೂನು ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದ್ದು, ಕಾನೂನು ಕ್ಷೇತ್ರದ ತಜ್ಞರು ಮತ್ತು ತಂತ್ರಜ್ಞರು ಸಹಯೋಗದಲ್ಲಿ ಕೆಲಸ ಮಾಡುವುದು ಅವಶ್ಯಕತೆಯಿದೆ ಎಂದು ಜಿಲ್ಲೆಯ ಮುಖ್ಯ ಮತ್ತು ಸೆಷನ್ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈಚೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಮ್ಮಿಕೊಂಡಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್-2024 7ನೇ ಆವೃತ್ತಿಯ ಫೈನಲ್ ಹ್ಯಾಕಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಂತ್ರಜ್ಞಾನವು ಕಾನೂನಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಕಾನೂನು ಕ್ಷೇತ್ರಗಳ ಮೇಲೆ ಸವಾಲುಗಳು ಸಹ ಹೆಚ್ಚುತ್ತಿವೆ ಎಂಬುವುದರ ಕುರಿತು ಅವರು ವಿವರಿಸಿದರು.
ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಎಸ್ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 7ನೇ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024 ಫೈನಲ್ ನಡೆಸಲು ವಿಟಿಯು ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದ್ದು, ಒಂದು ಐತಿಹಾಸಿಕ ಕ್ಷಣ ಎಂದರು. ಇವತ್ತಿನ ಅವಶ್ಯಕ ವಿಷಯಗಳಾದ ಡ್ರೋನ್ ತಂತ್ರಜ್ಞಾನ, ಎಐ ಮತ್ತು ಉತ್ಕೃಷ್ಟತಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದರು. ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ, ನೋಡಲ್ ಕೇಂದ್ರದ ಮುಖ್ಯಸ್ಥ ಆನಂದ ಕುಲಕರ್ಣಿ, ಪ್ರೊ.ಎಸ್.ಎ.ಅಂಗಡಿ ಇತರರಿದ್ದರು.