ಜಿಲ್ಲೆ

ಕೃಷಿಯಲ್ಲಿ ಹೊಸತನ ತರಲು ಅಭಿಯಾನ: ನೈಸರ್ಗಿಕ ಬೇಸಾಯದತ್ತ ಸರ್ಕಾರದ ಚಿತ್ತ

ಮಂಡ್ಯ: ಅತಿಯಾದ ರಾಸಾಯನಿಕ ಬಳಕೆಯಿಂದಾಗಿ ಕೃಷಿ ಕ್ಷೇತ್ರವೂ ಕಲುಷಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ‘ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ’ ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರಸ್ತುತ ಕೃಷಿಯಲ್ಲಿ ರಾಸಾಯನಿಕ ಕೃಷಿಯಿಂದಾಗಿ ಭೂಮಿಯ ಫಲವತತ್ತೆ ಹಾಳಾಗುತ್ತಿದೆ. ಮಾತ್ರವಲ್ಲದೆ ಮನುಷ್ಯನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ಆದ್ದರಿಂದ ರಾಸಾಯನಿಕ ಮುಕ್ತ ಕೃಷಿಯನ್ನು ಅಳವಡಿಸುವಂತೆ ರೈತರನ್ನು ಪ್ರೇರೆಪಿಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಯಡಿ ದೇಶದಲ್ಲಿ 1 ಕೋಟಿ ರೈತರಿಗೆ ನೈಸರ್ಗಿಕ ಕೃಷಿಯ ಅರಿವನ್ನು ಮೂಡಿಸಲಾಗುತ್ತಿದೆ. ಇದಕ್ಕಾಗಿ 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ 15 ಸಾವಿರ ಕ್ಲಸ್ಟರ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ರಾಜ್ಯದಲ್ಲಿ 49,500 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪ್ರಾರಂಭಿಸಲು 990 ಕ್ಲಸ್ಟರ್‌ಗಳಲ್ಲಿ ಜಾರಿಗೆ ತರಲಾಗುತ್ತಿದೆ.

4,250 ಎಕರೆ ಪ್ರದೇಶದಲ್ಲಿ ಅನುಷ್ಠಾನ: ಜಿಲ್ಲೆಯಲ್ಲಿ ಯೋಜನೆಯನ್ನು 34 ಗುಚ್ಚಗಳಲ್ಲಿ(ಪ್ರತಿ ಗುಚ್ಚ ಅಂದರೆ 1ರಿಂದ 2 ಗ್ರಾಮ ಪಂಚಾಯಿತಿ) 4,250 ಆಸಕ್ತ ರೈತರನ್ನು ಆಯ್ಕೆ ಮಾಡಿಕೊಂಡು 4,250 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಪೂರಕರವಾಗಿ ಕೆಲಸ ಮಾಡಲು ಪ್ರತೀ ಗುಚ್ಚದಲ್ಲಿ 2 ಕೃಷಿ ಸಖಿಯರನ್ನು ನೇಮಿಸಿಕೊಂಡು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ನೀಡಲಾಗಿದೆ.

ಇನ್ನು ಗುಚ್ಚಗಳ ಆಯ್ಕೆ ಮಾಡಿಕೊಳ್ಳುವಾಗ ವಿಶೇಷ ಅಂಶ ಗಮನಿಸಲಾಗಿದೆ. ಅಂದರೆ 5 ಗುಚ್ಚಗಳನ್ನು ನದಿಪಾತ್ರದಲ್ಲಿ ಹಾಗೂ 29 ಗುಚ್ಚಗಳನ್ನು ಹೆಚ್ಚು ರಾಸಾಯನಿಕ ಬಳಕೆಯಾಗುತ್ತಿರುವ ಗ್ರಾಪಂ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಡಿ ನೈಸರ್ಗಿಕ ಕೃಷಿ ವಿಧಾನ ಮತ್ತು ಭಾರತೀಯ ಸಾಂಪ್ರಾದಾಯಿಕ ಜ್ಞಾನದಲ್ಲಿ ಬೇರೂರಿರುವ ವೈವಿಧ್ಯಮಯ ಬೆಳೆ ವ್ಯವಸ್ಥೆ, ಜಾನುವಾರುಗಳು ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇದಲ್ಲದೆ ಮಣ್ಣಿನ ಆರೋಗ್ಯ ಸುಧಾರಿಸುವುದು, ಪರಿಸರ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸುವುದು, ಹೆಚ್ಚಿನ ಹವಾಮಾನ ಸ್ಥಿತಿ ಸ್ಥಾಪಕತ್ವವನ್ನು ಸಾಧಿಸಲು ರೈತರಿಗೆ ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ.

ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ ಕೆಲಸ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕೃಷಿ ಇಲಾಖೆ ಮತ್ತು ಬೆಳವಲ ಫೌಂಡೇಷನ್ ಬೆಳಗೊಳ ಸಹಯೋಗದೊಂದಿಗೆ ಕೃಷಿ ಇಲಾಖೆ ವಿಸ್ತರಣಾಧಿಕಾರಿಗಳು, ಕೃಷಿ ಸಖಿ ಹಾಗೂ ಜೈವಿಕ ಪರಿಕರ ಸಂಪನ್ಮೂಲ ಕೇಂದ್ರ ಪ್ರತಿನಿಧಿಗಳಿಗೆ ನೈಸರ್ಗಿಕ ಕೃಷಿ ಅಳವಡಿಕೆ ಕಾರ್ಯಾಗಾರವನ್ನು ಫೌಂಡೇಷನ್‌ನಲ್ಲಿ ನಡೆಸಲಾಗಿದೆ.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಆಶಾ ಫೌಂಡೇಷನ್‌ನ ಕವಿತಾ ಕುರುಗಂಟಿ, ನಮ್ಮ ರೈತರ ಮಾರುಕಟ್ಟೆಯ ಕವಿತಾ, ಪಾಂಡವಪುರ ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕರು(ವಿಷಯ ತಜ್ಞ) ಜಿ.ಶ್ರೀಹರ್ಷ, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ತರಬೇತಿಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ನೀಡಿದರು. ಮಾತ್ರವಲ್ಲದೆ ಪ್ರಗತಿಪರ ರೈತರಾದ ಶಿವಳ್ಳಿ ಬೋರೇಗೌಡ ಭತ್ತದಲ್ಲಿ ನೈಸರ್ಗಿಕ ಕೃಷಿ ಬೇಸಾಯ ಕ್ರಮಗಳ ಬಗ್ಗೆ, ಬೆಳವಲ ಫೌಂಡೇಷನ್‌ನ ಸಂಸ್ಥಾಪಕ ಡಾ.ರಾಮಕೃಷ್ಣಪ್ಪ, ನೈಸರ್ಗಿಕ ಕೃಷಿ ಪರಿಕಲ್ಪನೆ ಮತ್ತು ಜೈವಿಕ ಕೃಷಿ ಪರಿಕರಗಳ ಬಳಕೆ ಕುರಿತು, ನೈಸರ್ಗಿಕ ಕೃಷಿಕ ಮರಿದೇಸಿಗೌಡ, ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ಎಂ.ಎಸ್.ಕಿತ್ತೂರಮಠ ನೈಸರ್ಗಿಕ ಕೃಷಿ ಪದ್ಧತಿ ಮಹತ್ವ ಬಗ್ಗೆ ಉಪನ್ಯಾಸ ನೀಡಿದರು.

ಆಯ್ಕೆಯಾದ ರೈತರಿಗೆ ಪ್ರೋತ್ಸಾಹಧನ

‘ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ’ ಯೋಜನೆಯಡಿ ನೈಸರ್ಗಿಕ ಕೃಷಿ ಅಳವಡಿಸುವ ರೈತರಿಗೆ ತಲಾ 4000 ರೂ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದನ್ನು ಎರಡು ಕಂತಿನಲ್ಲಿ ಬಿಡುಗಡೆ ಮಾಡಲಾಗುವುದು. ಈ ರೈತರು ಮುಂದಿನ ದಿನದಲ್ಲಿ ತಲಾ ಐವರಿಗೆ ಅರಿವು ಮೂಡಿಸಬೇಕು. ಇದರೊಂದಿಗೆ ನೈಸರ್ಗಿಕ ಕೃಷಿ ಅಳವಡಿಸುವಂತೆ ಪ್ರೇರೆಪಿಸಲಿದ್ದಾರೆ. ಇದಲ್ಲದೆ ಯೋಜನೆಯಡಿ 23 ಜೈವಿಕ ಪರಿಕರ ಸಂಪನ್ಮೂಲ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ರೈತರಿಗೆ ಅಗತ್ಯವಿರುವ ಜೈವಿಕ ಪರಿಕರಗಳನ್ನು ಕಡಿಮೆ ದರದಲ್ಲಿ ಒದಗಿಸಲಾಗುತ್ತಿದೆ. ಮುಂದೆ ರೈತರು ನೈಸರ್ಗಿಕ ಪದ್ಧತಿಯಲ್ಲಿ ಬೆಳೆದಿರುವ ಬೆಳೆಯನ್ನು ಪರೀಕ್ಷೆಗೊಳಪಡಿಸಲಾಗುವುದು. ಜತೆಗೆ ಪ್ರಮಾಣಪತ್ರ ನೀಡಲಾಗುವುದು.

‘ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ’ಕ್ಕೆ ಶೇ.90ರಷ್ಟು ರೈತರನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಅಂತೆಯೇ ಕೃಷಿ ಸಖಿಯರಿಗೂ ತರಬೇತಿ ನೀಡಲಾಗಿದೆ. ನದಿಪಾತ್ರ ಹಾಗೂ ಹೆಚ್ಚು ರಾಸಾಯನಿಕ ಬಳಕೆಯಾಗುತ್ತಿರುವ ಗ್ರಾಪಂಗಳನ್ನು ಯೋಜನೆಗೆ ಒಳಪಡಿಸಲಾಗುತ್ತಿದೆ. ಶೀಘ್ರವೇ ಚಟುವಟಿಕೆ ಆರಂಭವಾಗಲಿದೆ. ವಿ.ಎಸ್.ಅಶೋಕ್ ಜಂಟಿ ಕೃಷಿ ನಿರ್ದೇಶಕ