ಜಿಲ್ಲೆ

ಅಂಚೆ ಜೀವ ವಿಮೆ ಅರಿವು ಕಾರ್ಯಕ್ರಮ

Davangere - Desk - Ganesh M K

ಹರಿಹರ: ಸಾಮಾಜಿಕ ಭದ್ರತೆಯ ಚಿಂತನೆಯೊಂದಿಗೆ ಅಂಚೆ ಇಲಾಖೆಯ ಜೀವ ವಿಮೆ ಯೋಜನೆ ರೂಪಿಸಲಾಗಿದೆ ಎಂದು ದಾವಣಗೆರೆ ವಿಭಾಗ ಅಂಚೆ ಅಧೀಕ್ಷಕ ಚಂದ್ರಶೇಖರ್ ತಿಳಿಸಿದರು.

ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಅಂಚೆ ಜೀವ ವಿಮೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ಅಂಚೆ ಇಲಾಖೆ ಇತ್ತೀಚೆಗೆ ವಿನೂತನ ಜೀವ ವಿಮೆ ಪಾಲಿಸಿ ಜಾರಿ ಮಾಡಿದೆ. ಚಿಕ್ಕ ಮಕ್ಕಳಿಂದ ಹಿರಿಯ ನಾಗರೀಕರವರೆಗೂ ಅನ್ವಯಿಸುವ ಸೂಕ್ತ ಎನಿಸುವ ವಿಮಾ ಯೋಜನೆಗಳಿವೆ.

ಯಾವುದೆ ಮುಚ್ಚಿದ ಅಥವಾ ಅಂತರಮುಖಿ ಷರತ್ತುಗಳಿಲ್ಲದೆ ಜನರ ಸಂಕಷ್ಟದಲ್ಲಿ ಸಹಾಯಕ್ಕೆ ಬರುವ ರೀತಿ ಯೋಜನೆಗಳಿವೆ. ಅಂಚೆ ವೆಬ್‌ಸೈಟ್, ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ವಿಮಾ ಪ್ರತಿನಿಧಿಯೊಂದಿಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹರಿಹರ ವಕೀಲರ ಸಂಘದ ಅಧ್ಯಕ್ಷ ರುದ್ರಗೌಡ ಪಿ. ಮಾತನಾಡಿ, ಹರಿಹರದಿಂದ 2 ಕಿ.ಮೀ. ಅಂತರದಲ್ಲಿ ಈ ನ್ಯಾಯಾಲಯ ಸಂಕೀರ್ಣವಿದೆ. ಈ ಸಂಕೀರ್ಣದಲ್ಲೆ ಒಂದು ಅಂಚೆ ಕಚೇರಿ ಆರಂಭಿಸಿದರೆ ವಕೀಲರು, ಕಕ್ಷಿದಾರರು ಹಾಗೂ ಸಮೀಪದ ಜನವಸತಿ ಪ್ರದೇಶಗಳ ಜನತೆಗೆ ಅನುಕೂಲ ಎಂದರು.

ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಅಂಚೆ ಅಧೀಕ್ಷಕ ಚಂದ್ರಶೇಖರ್ ಭರವಸೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ. ಹಟ್ಟಿ ಉದ್ಘಾಟಿಸಿದರು. ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಮಹಾದೇವ ಕಾನಟ್ಟಿ, 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶೆ ವೀಣಾ ಕೋಲೆಕಾರ್, ಅಂಚೆ ವಿಮಾ ಅಭಿವೃದ್ಧಿ ಅಧಿಕಾರಿ ಜಾಕಿರ್ ಹುಸೇನ್ ಇದ್ದರು.