ಅರಕಲಗೂಡು: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ಅರಕಲಗೂಡು ತಾಲೂಕಿಗೆ 249.92 ಕೋಟಿ ರೂ. ವ್ಯಯಿಸಿ, ಪಕ್ಷಾತೀತವಾಗಿ ಯಾವುದೇ ಭೇದವಿಲ್ಲದೆ ಜನರ ಕಲ್ಯಾಣಕ್ಕಾಗಿ ಶ್ರಮಿಸಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ತಿಳಿಸಿದರು.
ತಾಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿಯ ವಿ.ಜಿ.ಕೊಪ್ಪಲು ಗ್ರಾಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಕುಂದುಕೊರತೆ ಹಾಗೂ ಜನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಸಿವಿನಿಂದ ಯಾರೂ ಮಲಗಬಾರದು ಎಂಬ ಉದ್ದೇಶದಿಂದ ಜಾರಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಯಡಿ ತಾಲೂಕಿಗೆ 1.90 ಕೋಟಿ ಕ್ವಿಂಟಾಲ್ ಅಕ್ಕಿ ಸರಬರಾಜಾಗಿದ್ದು, 37.38 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನ 5183 ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನಂತೆ ಈವರೆಗೆ 145.10 ಕೋಟಿ ರೂ. ಹಾಗೂ 54805 ಮನೆಗಳಿಗೆ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲು 25.77 ಕೋಟಿ ರೂ. ಸೆಸ್ಕ್‌ಗೆ ಪಾವತಿಸಲಾಗಿದೆ. ಶಕ್ತಿ ಯೋಜನೆಯಡಿ ತಾಲೂಕಿನ ಅರಕಲಗೂಡು, ರಾಮನಾಥಪುರ ಬಸ್ ಡಿಪೋಗಳಿಗೆ 67.27 ಕೋಟಿ ರೂ. ಪಾವತಿಸಲಾಗಿದೆ. ಇದರಿಂದ ಆರೋಗ್ಯ ಸರಿಯಿಲ್ಲದೆ ನರಳುತ್ತಿದ್ದ ಮಹಿಳೆಯರು, ವೃದ್ಧರು ಬೆಂಗಳೂರು ಮತ್ತಿತರೆಡೆ ಆಸ್ಪತ್ರೆಗಳಿಗೆ ತೆರಳಿ ಗುಣಮಟ್ಟದ ಚಿಕಿತ್ಸೆ ಪಡೆಯುವಂತಾಗಿದೆ. ಯುವನಿಧಿ ಯೋಜನೆಯಡಿ 279 ನಿರುದ್ಯೋಗಿಗಳಿಗೆ ನೆರವಾಗಿದೆ. ಐದು ಯೋಜನೆಗಳಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಸಿಗುವ 2000 ರೂ. ಹಣದಿಂದ ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮತ್ತು ಕುಟುಂಬದ ಕಾರ್ಯಗಳಿಗೆ ವ್ಯಯಿಸಿದ್ದು ಯೋಜನೆ ಸಾರ್ಥಕವಾಗಿದೆ. ದೇಶದ ಕೆಲವು ರಾಜ್ಯಗಳು ಇದೇ ಯೋಜನೆಗಳನ್ನು ಅಳವಡಿಸಿಕೊಂಡಿವೆ. ಎಲ್ಲೋ ಒಂದಿಷ್ಟು ಜನ ಮಾಡುವ ಅಪಪ್ರಚಾರಗಳಿಗೆ ಕಿವಿಗೊಡದೆ ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಮಹತ್ವದ್ದಾಗಿದ್ದು, ಲೋಪದೋಷಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತಂದು ಕೊರತೆಗಳನ್ನು ನಿವಾರಿಸಿಕೊಳ್ಳಬೇಕು. ಮುಖ್ಯವಾಗಿ ನಿಮ್ಮ ಭಾಗವಹಿಸುವಿಕೆಯಿಂದ ಯೋಜನೆಗಳು ಸಾಕಾರಗೊಳ್ಳಲಿವೆ ಎಂದರು.
ಸಭೆಯಲ್ಲಿ ಸಲ್ಲಿಕೆಯಾದ 255 ಅರ್ಜಿಗಳ ಪೈಕಿ 203 ಅರ್ಜಿದಾರರಿಗೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸಲಾಯಿತು. ಜತೆಗೆ, ಉಳಿದ 52 ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶ್ರೀಧರ್‌ಗೌಡ ಸೂಚನೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿ ತಾಪಂ ಇಒ ಪ್ರಕಾಶ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಿನ್ನಸ್ವಾಮಿ, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಡಿಪೋ ವ್ಯವಸ್ಥಾಪಕ ಹನುಮಂತಪ್ಪ, ಜಿಲ್ಲಾ ಉದ್ಯೋಗಾಧಿಕಾರಿ ಜಯಲಕ್ಷ್ಮೀ ಇಲಾಖಾವಾರು ಯೋಜನೆಯ ಮಾಹಿತಿ ನೀಡಿದರು.
ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ, ಉಪ ತಹಸೀಲ್ದಾರ್ ಕುಮಾರ್, ಕೊಣನೂರು ಸೆಸ್ಕ್ ಸಹಾಯಕ ಇಂಜಿನಿಯರ್ ಯೋಗೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಬಿ.ಪಿ. ವೀರೇಶ್, ಸೋಮಶೇಖರ್, ನಾಗರಾಜು, ರಾಜೇಶ್, ವೀಣಾ, ಸತ್ಯರಾಜ್, ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ಯಶೋಧ ಕೃಷ್ಣ, ಪಿಡಿಒ ಮನು ಇತರರು ಇದ್ದರು.
ವಿದ್ಯುತ್ ಬಿಲ್ ಬರೆ: ಗೃಹಜ್ಯೋತಿ ಯೋಜನೆ ಜಾರಿಗೊಂಡರೂ ಹೆಚ್ಚಿನ ಮನೆಗಳಿಗೆ ಮೊದಲಿಗಿಂತಲೂ ದುಪ್ಪಟ್ಟು ವಿದ್ಯುತ್ ಬಿಲ್ ಬರೆ ಎಳೆಯಾಗುತ್ತಿದೆ. ಬಿಲ್ ಪಾವತಿಸುವುದು ಹೊರೆಯಾಗುತ್ತಿದ್ದು, ಯೋಜನೆ ತಮ್ಮ ಪಾಲಿಗೆ ಇದ್ದೂ ಇಲ್ಲವಾಗಿದೆ ಎಂದು ಸಭೆಯಲ್ಲಿ ಕೆಲವು ಮಹಿಳೆಯರು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಶ್ರೀಧರ್ ಗೌಡ, ವಿದ್ಯುತ್ ಗುತ್ತಿಗೆದಾರರ ಬಳಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಐದು ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಸಮಸ್ಯೆಗಳಿದ್ದರೆ ಇಲಾಖೆ ಅಧಿಕಾರಿಗಳು ಖುದ್ದು ಮನೆ ಬಾಗಿಲಿಗೆ ತೆರಳಿ ಪರಿಹಾರ ಒದಗಿಸಬೇಕು. ಇದಕ್ಕಾಗಿ ಫಲಾನುಭವಿಗಳ ಏನೇ ಕುಂದುಕೊರತೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಇಲಾಖೆಗಳಿಗೆ ಅಲೆಯುವುದು ತಪ್ಪಲಿದೆ ಎಂದರು.