ಹುಣಸೂರು: ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ತೊರೆದು ದೇಶೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡ ಶಿಕ್ಷಣ ಪದ್ಧತಿಯ ಜಾರಿ ಇಂದಿನ ಅನಿವಾರ್ಯವಾಗಿದೆ ಎಂದು ವಿದ್ಯಾಭಾರತಿ ಅಖಿಲ ಭಾರತ ಸಂಘಟನಾ ಮಂತ್ರಿ ಗೋವಿಂದಚಂದ್ರ ಮಹಂತ್ ಅಭಿಪ್ರಾಯಪಟ್ಟರು.
ನಗರದ ಶಾಸ್ತ್ರೀ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಶಿಶುವಾಟಿಕಾ ಆಚಾರ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಶು ಶಿಕ್ಷಣ ಅಡಿಪಾಯವಾಗಿದ್ದು, ಈ ಪದ್ಧತಿಯಲ್ಲಿ ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ ತಿಳಿಸುವ ಪಠ್ಯವನ್ನು ಇರಿಸುವ ಮೂಲಕ ಸದೃಢ ಭಾರತ ನಿರ್ಮಿಸಲು ಸಹಕಾರಿಯಾಗಲಿದೆ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ಶಿಕ್ಷಣದಲ್ಲಿ ಬದಲಾವಣೆ ಕಾಣದೆ ಪಾಶ್ಚಿಮಾತ್ಯ ಸಂಸ್ಕೃತಿ ವ್ಯಾಸಂಗ ಮಾಡುವ ಪದ್ಧತಿ ಜಾರಿಯಲ್ಲಿದೆ. ನಮ್ಮ ದೇಶ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ನೀತಿ ಅಳವಡಿಸಿಕೊಂಡಿದ್ದರೂ ದೇಶದ ಅಭಿವೃದ್ಧಿಗೆ ಅಗತ್ಯ ಬೇಕಿರುವ ಶಿಕ್ಷಣದಲ್ಲಿ ಬದಲಾವಣೆ ಈವರೆಗೂ ಕಾಣದೆ ದೇಶೀಯ ಸಂಸ್ಕೃತಿ ಮತ್ತು ಸಂಪ್ರದಾಯ ಭವಿಷ್ಯದ ಕುಡಿಗಳಿಗೆ ಇಲ್ಲವಾಗಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಸಕಾರಾತ್ಮಕ ಚಿಂತನೆ ಬಿತ್ತುವುದರಿಂದ ಉತ್ತಮ ಪ್ರಜೆಯನ್ನು ಸೃಷ್ಟಿಸಲು ಸಹಕಾರಿಯಾಗಲಿದೆ. ದೇಶಕ್ಕೆ ಮಕ್ಕಳು ಆಸ್ತಿಯಾಗಬೇಕಿದ್ದು, ಆ ದಿಕ್ಕಿನಲ್ಲಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಶಿಶುವಾಟಿಕ ಹಂತದ ಶಿಕ್ಷಕ ಮತ್ತು ಪಾಲಕರು ಮಕ್ಕಳಿಗೆ ದೇಶೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಶಿಕ್ಷಣವನ್ನು ಕಲಿಸುವ ಪ್ರಯತ್ನ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷ ಪರಮೇಶ್ವರ ಹೆಗ್ಗಡೆ ಮಾತನಾಡಿದರು. ಪ್ರಾಸ್ತಾವಿಕವಾಗಿ ತಾರಾ ಮಾತನಾಡಿದರು. ಶಾಸ್ತ್ರೀ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿದರು. 600ಕ್ಕೂ ಹೆಚ್ಚು ಶಿಶುವಾಟಿಕಾ ಆಚಾರ್ಯರು ಪಾಲ್ಗೊಂಡಿದ್ದರು.