ಮಂಡ್ಯ: ಜಿಲ್ಲೆಯಲ್ಲಿ ಮುಗುಳುನಗೆಯ ಸಿಂಚನ ಹಾಗೂ ಹೃದಯ ವೈಶಾಲ್ಯ ಯೋಜನೆ ಯಶಸ್ವಿಯ ಬಳಿಕ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಅನುಕೂಲವಾಗಲೆಂದು ‘ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಯೋಜನೆ’ ಅನುಷ್ಠಾನಗೊಂಡಿದೆ. ಮಾತ್ರವಲ್ಲದೆ ಈಗಾಗಲೇ ಸಾವಿರಾರೂ ಜನರು ಇದರ ಉಪಯೋಗಪಡಿಸಿಕೊಂಡಿದ್ದಾರೆ.
ಅಂಧತ್ವ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ’ಆಶಾಕಿರಣ’ ಕಾರ್ಯಕ್ರಮ 2022-23ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರಯಲ್ಲಿ ಜಾರಿಗೊಳಿಸಲಾಗಿತ್ತು. ಅಂತೆಯೇ ಸಿಎಂ ಸಿದ್ದರಾಮಯ್ಯ ಹಾವೇರಿಯಲ್ಲಿ ಇದಕ್ಕೆ ಚಾಲನೆ ನೀಡಿದ್ದರು. ಇದೀಗ 2023-24ನೇ ಸಾಲಿನಲ್ಲಿ ಮಂಡ್ಯ, ಚಿತ್ರದುರ್ಗ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ.
92,080 ಜನರಿಗೆ ದೃಷ್ಟಿದೋಷ: ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆಯೇ ಯೋಜನೆ ಜಾರಿಗೊಂಡಿದೆ. ಅದರಂತೆ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಜಿಲ್ಲೆಯ 18,06,589 ಜನರಿಗೆ ನೇತ್ರ ತಪಾಸಣೆಯನ್ನು ನಡೆಸಿದ್ದರು. ಅಂದರೆ 10 ಅಡಿ ದೂರದಲ್ಲಿ ಒಂದು ಪುಸ್ತಕವನ್ನಿಟ್ಟು ಅಕ್ಷರ ಅಥವಾ ಚಿತ್ರ ತೋರಿಸುವ ಮೂಲಕ ಪರೀಕ್ಷೆ ನಡೆಸಿದ್ದರು. ಅದರಂತೆ ನಡೆದ ಪ್ರಾಥಮಿಕ ಹಂತದಲ್ಲಿ 2,85,029 ಜನರಲ್ಲಿ ಸಮಸ್ಯೆ ಕಂಡುಬಂದಿತ್ತು. ಇದಾದ ಬಳಿಕ ನೇತ್ರ ಸಹಾಯಕರ ಮೂಲಕ ಆರೋಗ್ಯ ಕೇಂದ್ರಗಳಲ್ಲಿ ದ್ವಿತೀಯ ಹಂತ ತಪಾಸಣೆ ನಡೆಸಲಾಯಿತು. ಈ ವೇಳೆ 92,080 ಜನರಿಗೆ ದೃಷ್ಟಿದೋಷ ಹಾಗೂ 21 ಸಾವಿರ ಜನರಿಗೆ ಕಣ್ಣಿನ ಪೊರೆ ಸಮಸ್ಯೆ ಇರುವುದು ಕಂಡುಬಂದಿದೆ.
ದೃಷ್ಟಿದೋಷ ಕಂಡುಬಂದಂತಹವರಿಗೆ ಸರ್ಕಾರದಿಂದಲೇ ಕನ್ನಡಕ ವಿತರಣೆ ಮಾಡಲಾಗುತ್ತಿದೆ. ಇದಕ್ಕೆಂದು ದರವನ್ನು ನಿಗದಿಪಡಿಸಲಾಗಿದೆ. ಅದರಂತೆ ಆಶಾಕಿರಣ ಕಾರ್ಯಕ್ರಮದಡಿ ಈಗಾಗಲೇ 9,260 ಜನರಿಗೆ ಕನ್ನಡಕ ವಿತರಿಸಲಾಗಿದೆ. ಕಣ್ಣಿನಪೊರೆ ಸಮಸ್ಯೆ ಕಂಡುಬಂದ 21 ಸಾವಿರ ಜನರ ಪೈಕಿ ಈಗಾಗಲೇ 5 ಸಾವಿರ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದ್ದು, ಉಳಿದ 16 ಸಾವಿರ ಜನರಿಗೆ ಶಸ್ತ್ರಚಿಕಿತ್ಸೆಗೊಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಯೋಜನೆ ವಿಸ್ತರಿಸಲು ಯೋಜನೆ: ಆಶಾಕಿರಣ ಯೋಜನೆ ಇನ್ನಷ್ಟು ಜನರಿಗೆ ಅನುಕೂಲವಾಗಲೆಂದು ವಿಸ್ತರಣೆ ಮಾಡಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈಗಾಗಲೇ ಮನೆಗೆ ತೆರಳಿ ಪರಿಶೀಲನೆ ನಡೆಸಿದರೂ ಕೆಲವೊಬ್ಬರು ಸೌಲಭ್ಯದಿಂದ ವಂಚಿತರಾಗಿರುವ ಸಾಧ್ಯತೆ ಇದೆ. ಆದ್ದರಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರು ಸೌಲಭ್ಯ ಪಡೆದುಕೊಳ್ಳಬಹುದು. ಇನ್ನು ಮುಂದಿನ ಹಂತದಲ್ಲಿ ಇಲಾಖಾವಾರು ಹಾಗೂ ಸಂಘ ಸಂಸ್ಥೆಗಳ ಮೂಲಕ ಶಿಬಿರ ಆಯೋಜಿಸಿ ಅರ್ಹರು ಯೋಜನೆಯ ಲಾಭಪಡೆದುಕೊಳ್ಳುವಂತೆ ಮಾಡಲು ಚಿಂತಿಸಲಾಗಿದೆ.
ತಿಂಗಳಾಂತ್ಯದೊಳಗೆ ಕನ್ನಡಕ ವಿತರಣೆ: ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಯೋಜನೆಯಡಿ ಜಿಲ್ಲೆಯಲ್ಲಿ 9,260 ಜನರಿಗೆ ಕನ್ನಡಕ ವಿತರಣೆ ಮಾಡಲಾಗಿದ್ದು, ನವೆಂಬರ್ ಅಂತ್ಯದೊಳಗೆ ಉಳಿದ 81,020 ಜನರಿಗೆ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಸಹಯೋಗದಲ್ಲಿ ಶುಕ್ರವಾರ ಆಶಾಕಿರಣ ಫಲಾನುಭವಿಗಳಿಗೆ ಕನ್ನಡಕ ವಿತರಿಸಿ ಮಾತನಾಡಿದ ಅವರು, ಆಶಾಕಿರಣ ಕಾರ್ಯಕ್ರಮದಡಿ ಆಯೋಜಿಸಲಾಗುವ ನೇತ್ರ ಉಚಿತ ಚಿಕಿತ್ಸಾ ಶಿಬಿರ ಜನಸಾಮಾನ್ಯರಿಗೆ ವರದಾನವಾಗಲಿದೆ. ಕಣ್ಣಿನ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಜನೋಪಯೋಗಿ ಕಾರ್ಯಕ್ರಮವನ್ನು ಎಲ್ಲ ಇಲಾಖೆ ಮೂಲಕ ಮಾಡಲಾಗುತ್ತಿದೆ. ಇದರ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಜನರ ಅನುಕೂಲಕ್ಕಾಗಿ ತರಲಾಗಿದೆ. ಸರ್ಕಾರವು ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗದೆ ನಿರಂತರವಾಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಜನ ಸಾಮಾನ್ಯರಿಗೆ ಕಣ್ಣಿನ ಸಮಸ್ಯೆಯ ಅರಿವಿನ ಕೊರತೆ ಇದ್ದು, ಅದರ ಬಗ್ಗೆ ತಿಳಿಸುವ ಅವಶ್ಯಕತೆ ಇದೆ. ದೂರದೃಷ್ಟಿ ಸಮಸ್ಯೆ, ಸಮೀಪ ದೃಷ್ಟಿ ಸಮಸ್ಯೆ ಮುಂತಾದ ಕಣ್ಣಿನ ಸಮಸ್ಯೆಯನ್ನು ಹೋಗಲಾಡಿಸಲು ಆಸ್ಪತ್ರೆಗೆ ತೆರಳಲು ಕೆಲವು ಜನರಿಗೆ ಆರ್ಥಿಕ ಪರಿಸ್ಥಿತಿಯ ತೊಂದರೆ ಇರುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅರಿವು ಮೂಡಿಸಿ ಎಲ್ಲ ವಯಸ್ಸಿನವರಿಗೆ ಕಣ್ಣಿನ ತಪಾಸಣೆ ಮಾಡಿ ದೃಷ್ಟಿದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಆವಶ್ಯಕತೆಯಿರುವವರಿಗೆ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಂ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಇತರರಿದ್ದರು.