ಬೆಂಗಳೂರು: ಮೀಸಲಾತಿ ಸೇರಿ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಪರಿಶಿಷ್ಟ ಜಾತಿಗಳ ಶಾಶ್ವತ ರಾಜ್ಯ ಆಯೋಗ ರಚನೆ, ಕಾಯ್ದೆ ತಿದ್ದುಪಡಿ ಮತ್ತು ವಿಶೇಷ ಪ್ಯಾಕೇಜ್ ಘೋಷಣೆ ಸೇರಿ 6 ನಿರ್ಣಯಗಳನ್ನು ವಿಮುಕ್ತ ಅಲೆಮಾರಿ ಸಮುದಾಯಗಳು ತೆಗೆದುಕೊಂಡಿದೆ.
ಅಲೆಮಾರಿಗಳ ವಿಮೋಚನಾ ದಿನ ನಿಮಿತ್ತ ಗಾಂಧಿಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ಹಲವು ಸಮುದಾಯಗಳು ತೀರ್ಮಾನಿಸಿವೆ.
ಸಮುದಾಯಗಳ ಇತಿಹಾಸ, ಅಸ್ಮಿತೆ, ಘನತೆ ಮತ್ತು ಪ್ರಗತಿ ದೃಷ್ಟಿಯಿಂದ ಪ್ರತಿ ವರ್ಷ ಆ.31ರಂದು ‘ಅಲೆಮಾರಿಗಳ ವಿಮೋಚನಾ ದಿನ’ವನ್ನಾಗಿ ಘೋಷಿಸಬೇಕು. ಅಲೆಮಾರಿಗಳ ಮಾನವ ಹಕ್ಕು ದಮನಕ್ಕೆ ದುರ್ಬಳಕೆವಾಗುತ್ತಿರುವ ಹ್ಯಾಬಿಚ್ಯುವಲ್ ಅಫೆಂಡರ್ಸ್-1952 ಆಕ್ಟ್‌ಗೆ ತಿದ್ದುಪಡಿ ತರಬೇಕು. ಶಿಕ್ಷಣ, ಉದ್ಯೋಗ, ಅರ್ಥಿಕ ಕಲ್ಯಾಣಕ್ಕಾಗಿ ಶಾಶ್ವತ ಆಯೋಗ ಸ್ಥಾಪಿಸಿ ವಿಶೇಷ ಪ್ಯಾಕೇಜ್ ನೀಡಬೇಕು. ಪರಿಶಿಷ್ಟ ಜಾತಿ( ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿ) ಪಟ್ಟಿಗಳಲ್ಲಿ ವಿಮುಕ್ತ ಅಲೆಮಾರಿ ಸಮುದಾಯಗಳು ಹಂಚಿ ಹೋಗಿವೆ. ಹಾಗಾಗಿ, ಸಮುದಾಯಗಳ ಸಂಘಟಿಸಲು ಯೋಜನೆ ರೂಪಿಸಬೇಕು ಎಂದು ಸಮುದಾಯಗಳ ಪ್ರಮುಖ ಮುಖಂಡರು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ಸರ್ಕಾರವು ಒಳಮೀಸಲಾತಿ ಕಲ್ಪಿಸಿದೆ. ಪ್ರವರ್ಗ ‘ಸಿ’ ಗುಂಪಿನಲ್ಲಿ ಕೊರಚ ಸೇರಿ 50ಕ್ಕೂ ಅಧಿಕ ಸೂಕ್ಷ್ಮ ಮತ್ತುಅತಿ ಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇ.5 ಮೀಸಲಾತಿ ಹಂಚಿಕೆ ಮಾಡಿದೆ. ಆದರೆ, ಸೂಕ್ಷ್ಮ ಸಮುದಾಯಗಳು ‘ಸಿ’ ಗುಂಪಿನಲ್ಲಿ ಇರಲು ಇಚ್ಚಿಸದಿದ್ದರೆ ಅವರಿಗೆ ಪ್ರತ್ಯೇಕ ಗುಂಪು ಮಾಡಿ ಹೆಚ್ಚುವರಿ ಮೀಸಲಾತಿ ಹಂಚಿಕೆ ಮಾಡಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ವಕೀಲ ಅನಂತ ನಾಯ್ಕ ಹೇಳಿದ್ದಾರೆ.
ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಸಚಿವೆ ಬಿ.ಟಿ.ಲಲಿತನಾಯ್ಕ, ನಿವೃತ್ತ ನ್ಯಾಯಾಧೀಶ ವೆಂಕಟೇಶ ವೊರ್ಸೆ, ಹಿರಿಯ ವಕೀಲ ಸುಭಾಷ್ ರಾಠೋಡ್, ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.