ಅಳವಂಡಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಘಟನೆಗಳ ಜತೆ ಕೈಜೋಡಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಆಯುಷ್ ವೈದ್ಯ ತುಕಾರಾಮ ತಿಳಿಸಿದರು.
ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಡರಗಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ಆಯುರ್ವೇದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಮನುಷ್ಯ ಜೀವಿಸಲು ಹಾಗೂ ಜೀವನಕ್ಕೆ ಎಲ್ಲವನ್ನು ಕೊಟ್ಟಿದೆ. ಸಸಿಗಳನ್ನು ನೆಟ್ಟು ಬೆಳೆಸುವ ಪರಿಪಾಟ ಬೆಳೆಸಿಕೊಳ್ಳಬೇಕು. ಪರಿಸರ ಜತೆಗೆ ಬೆಳೆದು ಬಾಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಆಯುಷ್ ವೈದ್ಯ ಬಸವರಾಜ ಮಾತನಾಡಿ, ನಾವು ವಾಸಿಸುವ ಪರಿಸರದಲ್ಲಿ ಆಯುರ್ವೇದ ಸಸ್ಯಗಳಿವೆ. ಈ ಸಸ್ಯಗಳ ಮಾಹಿತಿ ನೀಡುವ ಕೆಲಸ ಆಗಬೇಕು ಎಂದರು.