ಮೈಸೂರು: ವಿವೇಕ ಹಾಗೂ ಅಧ್ಯಾತ್ಮವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಜಾಗೃತರನ್ನಾಗಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಅಭಿಪ್ರಾಯಪಟ್ಟರು.
ಕೃಷ್ಣಮೂರ್ತಿಪುರಂನ ಶಾರದ ವಿಲಾಸ ಕಾಲೇಜು ಹಾಗೂ ಸೈನ್ಸ್ ಆಫ್ ಸ್ಕೂಲಿಂಗ್ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸೈನ್ಸ್ ಆಫ್ ಸ್ಕೂಲಿಂಗ್ ಸಮ್ಮೇಳನ-ದ್ವಿತೀಯ ಆವೃತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಪದವಿಗಳೂ ಬೇಡಿಕೆ ಕಳೆದುಕೊಳ್ಳುತ್ತಿವೆ. ಕಂಪನಿಗಳಿಗೆ ವಿದ್ಯಾವಂತರು, ಪ್ರತಿಭಾವಂತರು, ಪ್ರಾಮಾಣಿಕರು ಬೇಡವಾದ ಪರಿಸ್ಥಿತಿ ಎದುರಾಗುತ್ತಿದೆ. ತಮ್ಮ ಉದ್ಯಮಕ್ಕೆ ದುಡಿಯುವ ಕುಶಲಕರ್ಮಿಗಳಷ್ಟೇ ಈಗ ಬೇಕಾಗಿದ್ದಾರೆ ಎಂದು ಹೇಳಿದರು.
ಇಂತಹ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಪಠ್ಯಕ್ರಮಗಳು ಬದಲಾವಣೆಯಾಗಬೇಕು. ಇದರೊಂದಿಗೆ ವಿವೇಕ ಹಾಗೂ ಅಧ್ಯಾತ್ಮವನ್ನು ಶಿಕ್ಷಣ ಅಳವಡಿಸಿದರೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಎಂದರು.
ಶಿಕ್ಷಕರಾದವರು ಸತತ ಪರಿಶ್ರಮ, ಪುಸ್ತಕದ ಓದು ಹಾಗೂ ಹೆಚ್ಚಿನ ವಿಷಯ ಪಾರಾಂಗತನ ಅವಶ್ಯಕ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಇಂದಿನ ಶಿಕ್ಷಕರು ಕಲಿತರೆ, ಪ್ರಬುದ್ಧವಾಗಿ ಶಿಕ್ಷಣ ರಂಗ ಶರವೇಗದಲ್ಲಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಣದ ಉದ್ದೇಶವನ್ನು ಮರು ಚಿಂತಿಸುವುದು, ಆಯೋಚಿಸುವುದು ಅತ್ಯವಶ್ಯಕವಾಗಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ತಾರ್ಕಿಕವಾಗಿ ಆಲೋಚಿಸುವ ಗುಣ ಬೆಳೆಯಬೇಕು. ದೇಹ ಹಾಗೂ ಮನಸ್ಸಿನ ಸಮತೋಲನ ನಿಖರವಾಗಿಬೇಕು. ಹಾಗಾದಲ್ಲಿ ಶಿಕ್ಷಣದ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಿದಂತಾಗುತ್ತದೆ ಎಂದರು.
ಶಿಕ್ಷಣ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡಿದ್ದು, ನಂತರದಲ್ಲಿ ಬದಲಾವಣೆಯಾದ ಶಿಕ್ಷಣವನು ್ನತೌಲನಿಕವಾಗಿ ಅಧ್ಯಯನ ನಡೆಸಿ, ಶಿಕ್ಷಣ ತಜ್ಞರು ಹಾಗೂ ವಿದ್ವಾಂಸರು ಅಗತ್ಯವಿರುವ ಕೌಶಲಗಳನ್ನು, ಪ್ರಾಯೋಗಿಕ ತರಗತಿಗಳನ್ನು ಏರ್ಪಡಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಬೇಕು ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಪಿ.ನಾಗಭೂಷಣ್ ಮಾತನಾಡಿ, ಜನರು ಇಂದು ಶಿಕ್ಷಣ ಎಂದರೆ ಕೇವಲ ಕೆಲಸ ತೆಗೆದುಕೊಳ್ಳುವ ಮಾಧ್ಯಮ ಎಂಬುದಾಗಿ ಪರಿಗಣಿಸುತ್ತಿದ್ದಾರೆ. ಉದ್ಯೋಗ ನೀಡುವ ಅಧಿಕಾರಿ ವರ್ಗಕ್ಕೆ ಸಿಗುವ ಮನ್ನಣೆ ಪ್ರಸ್ತುತ ದಿನಗಳಲ್ಲಿ ಕುಲಪತಿಗಳಿಗೆ, ಅಧ್ಯಾಪಕ ವರ್ಗದವರಿಗೆ ದೊರೆಯುತ್ತಿಲ್ಲ ಎನ್ನುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮಾಹಿತಿಯನ್ನು ಸಂಗ್ರಹಿಸುವುದು, ನೆನಪಿನ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸುವುದು ಇಂದಿನ ಶಿಕ್ಷಣ ವ್ಯವಸ್ಥೆಯಾಗಿದೆ. ಇದು ಸಂಪೂರ್ಣವಾಗಿ ಬದಲಾಗಬೇಕು. ಆಯೋಚಿಸುವ, ಪ್ರಶ್ನಿಸುವ, ಅನ್ವೇಷಿಸುವ ಬುದ್ಧಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಪಠ್ಯಕ್ರಮವನ್ನು ನಾವು ರೂಪಿಸುವುದು ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಕ್ಷೇತ್ರದ ಸೇವೆ ಪರಿಗಣಿಸಿ ಡಾ.ಕೆ.ಚಿದಾನಂದಗೌಡ ಅವರಿಗೆ ಶಿಕ್ಷಣದ ದಂತಕತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಜಿ.ಹೇಮಂತ್‌ಕುಮಾರ್, ಮೈಸೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಆಂಫಿ ವೆನ್ಚರ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಪ್ರದೀಪ್‌ಕುಮಾರ್, ಜಾಗತಿಕ ಪರಿವರ್ತನೆಯ ನಾಯಕ ಡಾ.ಎಸ್.ಜೆ. ನಾಗನಗೌಡ, ಶಾರದ ವಿಲಾಸ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಎಂ ಸುಬ್ರಾಯ, ಕಾರ್ಯದರ್ಶಿ ಆರ್.ನರಸಿಂಹ, ಆಡಳಿತ ಮಂಡಳಿ ಸದಸ್ಯ ಟಿ.ಕೆ.ಉಮೇಶ್, ಎಸ್.ಎಲ್.ರಾಮಚಂದ್ರ, ಡಾ. ಸಂಗಮೇಶ್ವರ್ ಇತರರು ಇದ್ದರು.