ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶೋಷಿತ ಸಮುದಾಯಗಳ ಮುಖಂಡರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಮಾಜಿ ಶಾಸಕ ರಾಜು ಆಲಗೂರ, ಅಬ್ದುಲ್‌ಹಮೀದ್ ಮುಶ್ರೀಫ್, ಮಹ್ಮದ್‌ರಫೀಕ್ ಟಪಾಲ್ ಮತ್ತಿತರರಿದ್ದಾರೆ.  
ಜಿಲ್ಲೆ

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಗೊಳಿಸಿ; ಸಿಎಂ ಸಿದ್ದರಾಮಯ್ಯಗೆ ಶೋಷಿತ ಸಮುದಾಯಗಳ ಒಕ್ಕೋರಲ ಆಗ್ರಹ

ವಿಜಯಪುರ: ಯಾರೇ ವಿರೋಧಿಸಿದರೂ, ಎಂಥದ್ದೇ ಸನ್ನಿವೇಶ ಎದುರಾದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಜಾರಿಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಇತಿಹಾಸ ಸೃಷ್ಠಿಸಬೇಕೆಂದು ಅಹಿಂದ ಮುಖಂಡರುಗಳು ಒಕ್ಕೋರಲಿನಿಂದ ಆಗ್ರಹಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಗೊಳಿಸಲು ಆಗ್ರಹಿಸಿ ಕಳೆದ ಆರು ತಿಂಗಳಿನಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬರಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಕೊಡಲಾಗಿದೆ. ಅನೇಕ ಸಮಾವೇಶಗಳ ಮೂಲಕ ಹಕ್ಕೊತ್ತಾಯ ಮಂಡಿಸಲಾಗಿದೆ. ಆದರೆ, ಇದೀಗ ಸಮೀಕ್ಷಾ ವರದಿ ಜಾರಿ ಕುರಿತು ಕೆಲವು ಅಪಸ್ವರ ಕೇಳಿ ಬರುತ್ತಿದ್ದು ಅದಕ್ಕೆಲ್ಲ ಸೊಪ್ಪು ಹಾಕದೇ ವರದಿ ಜಾರಿ ಮಾಡಲೇಬೇಕು. ಸಿದ್ದರಾಮಯ್ಯ ಅವರು ಅತ್ಯಂತ ಧೈರ್ಯದಿಂದ ತೀರ್ಮಾನ ತೆಗೆದುಕೊಳ್ಳಬೇಕು. ಅವರ ಹಿಂದೆ ನಾವಿದ್ದೇವೆ ಎಂದು ಮಂಗಳವಾರ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ವಿಧಾನ ಸಭೆ ಚುನಾವಣೆ ಪೂರ್ವದಲ್ಲಿಯೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆ ಪ್ರಕಾರ ಆಯೋಗ ರಚಿಸಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸಲಾಗಿದೆ. ಈಗಾಗಲೇ ವರದಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚೆಯೂ ಆಗಿದೆ. ಮೇಲ್ವರ್ಗದ ಶಾಸಕ, ಮಂತ್ರಿಗಳಿಗೂ ಆ ವರದಿಯ ಪ್ರತಿ ಅಧ್ಯಯನ ಮಾಡಲು ಪೂರೈಕೆ ಮಾಡಲಾಗಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲವೆಂದರು.

ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಮರು ವರದಿ ಮರು ಪರಿಶೀಲಸಬೇಕೆಂದು ಒತ್ತಾಯಿಸಿದ್ದಾರೆ. ಅವರ ಬೇಡಿಕೆಗೆ ನಮ್ಮ ವಿರೋಧವಿಲ್ಲ. ಇದು ಎಲ್ಲರ ಸಹಮತದಿಂದಲೇ ತಯಾರಾದ ವರದಿ. ಹೀಗಾಗಿ ಏನೇ ಅನುಮಾನ ಇದ್ದರೂ ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗೊಂದು ವೇಳೆ ಆ ಎರಡೂ ಸಮುದಾಯಗಳ ಬಗ್ಗೆ ಮರು ಸಮೀಕ್ಷೆ ನಡೆಸುವುದೇ ಆದರೆ ಅದಕ್ಕೂ ಅವಕಾಶವಿದ್ದು, ನಮ್ಮದೇನೂ ಅಭ್ಯಂತರವಿಲ್ಲ. ನಮಗೆ ಸಿಗಬೇಕಾದ ನ್ಯಾಯದಲ್ಲಿ ಉದಾರಿಗಳಾಗಬೇಕೆಂದರು.

ವಿಪರ್ಯಾಸವೆಂದರೆ ಸಂಸದ ಯದುವೀರ ಕೃಷ್ಣರಾಜ ಒಡೆಯರ ಕೂಡ ಈ ವರದಿ ವಿರೋಧ ಮಾಡುತ್ತಿದ್ದಾರೆ. ಕೃಷ್ಣರಾಜ ಒಡೆಯರ ಅವರು ಆ ಕಾಲದಲ್ಲಿಯೇ ಮೀಸಲಾತಿ ಜಾರಿಗೊಳಿಸಿದವರು. ಇಂದಿನ ಸಂಸದರಿಗೆ ಆ ಕುರಿತ ಪರಿಜ್ಞಾನ ಇಲ್ಲದಿರುವುದು ವಿಪರ್ಯಾಸ ಎಂದರು.

ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಲ್ಲಿ ನಂಬಿಕೆ ಇರಿಸಿದೆ. ಅಣ್ಣ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿದೆ. ಎಲ್ಲರಿಗೂ ಅವರವರ ಹಕ್ಕು ಪಡೆದುಕೊಳ್ಳುವ ಅಧಿಕಾರ ಇದೆ. ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಅವಕಾಶ ಇದೆ. ಹೀಗಾಗಿ ಸರ್ವರ ಸಮ್ಮತಿ ಮೇರೆಗೆ ವರದಿ ಜಾರಿಗೊಳ್ಳುತ್ತಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಸಿದ್ದರಾಮಯ್ಯ ಅವರು ವರದಿ ಜಾರಿಗೊಳಿಸಬೇಕೆಂದರು.

ಕಾಂಗ್ರೆಸ್‌ನ ಸಚಿವರುಗಳೇ ವರದಿ ಕುರಿತು ಅಪಸ್ವರ ಎತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಮುಖಂಡ ಸೋಮನಾಥ ಕಳ್ಳಿಮನಿ, ಕಳೆದ 70 ವರ್ಷಗಳಿಂದ ಕೆಲವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಅಹಿಂದ ವರ್ಗವನ್ನು ತುಳಿಯುವ ಪ್ರಯತ್ನ ಈಗಲೂ ನಡೆಯುತ್ತಿದೆ ಎಂದರು.

ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಮಹ್ಮದ್‌ರಫೀಕ್ ಟಪಾಲ್, ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಬಿಜೆಪಿಯವರು ಯಾವಾಗಲೂ ಅಹಿಂದ ವಿರೋಧಿಗಳು. ಅವರು ಯಾವಾಗಲೂ ವಿರೋಧ ಮಾಡುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅದರಲ್ಲೂ ಸಿದ್ದರಾಮಯ್ಯ ಅವರು ವರದಿ ಜಾರಿಗೊಳಿಸಲೇಬೇಕೆಂದು ಶೋಷಿತ ಸಮುದಾಯಗಳ ಆಗ್ರಹಕ್ಕೆ ಮನ್ನಣೆ ನೀಡಬೇಕೆಂದರು.

ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ವಸಂತ ಹೊನಮೋಡೆ, ಎಂ.ಸಿ. ಮುಲ್ಲಾ ಮತ್ತಿತರರಿದ್ದರು.