ಚಿಕ್ಕಮಗಳೂರಲ್ಲಿ ಪಿಂಚಣಿ ವಂಚಿತ ನೌಕರರ ಸಂಘ ಹಾಗೂ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘದಿಂದ ಓಪಿಎಸ್ ಹಕ್ಕೋತಾಯ ಕುರಿತು ಚಿಂತನಾ ಸಭೆ ನಡೆಸಲಾಯಿತು. ಕೆ.ಸಿ.ಮಂಜುನಾಥ್, ಶ್ರೀಧರ್, ಕೇಶವ, ನವೀನ್, ದುಶ್ಯಂತ್, ಲಕ್ಷ್ಮಣ್, ಗಂಗಾಧರ್ ಇದ್ದರು. 
ಜಿಲ್ಲೆ

ಹಿಂದಿನ ಪಿಂಚಣಿ ಸೌಲಭ್ಯವನ್ನೇ ಜಾರಿಗೊಳಿಸಿ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಸರ್ಕಾರಿ ನೌಕರರಿಗೆ ಮಾರಕವಾದ ನೂತನ ಪಿಂಚಣಿ ಸೌಲಭ್ಯ ರದ್ದುಗೊಳಿಸಿ 2006ರ ಹಿಂದಿನ ಹಳೆಯ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್.ಚೇತನ್ ಒತ್ತಾಯಿಸಿದರು.
ಗಾಂಧಿ ಪ್ರತಿಮೆ ಎದುರು ಪಿಂಚಣಿ ವಂಚಿತ ನೌಕರರ ಸಂಘ ಹಾಗೂ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಓಪಿಎಸ್ ಹಕ್ಕೋತಾಯ ಕುರಿತು ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲೂ ನೂರಾರು ಮಂದಿ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರಿಂದ ಅನಾರೋಗ್ಯ ಅಥವಾ ಸಣ್ಣ ಪುಟ್ಟ ಖರ್ಚುಗಳಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ನೌಕರರಿಗೆ ಈ ಹಿಂದಿನ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.
ಪಿಂಚಣಿ ವಂಚಿತ ನೌಕರರು ಹಾಗೂ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಲಾಗಿದೆ. ಸಿಎಂ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಿಂದಿನ ಪಿಂಚಣಿ ಸೌಲಭ್ಯ ಜಾರಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.