ಕೆ.ಎಂ.ದೊಡ್ಡಿ: ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಫಲಾನುಭವಿಗಳಿಗೆ ಯಾವುದೇ ರೀತಿಯ ಅನನುಕೂಲವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ಬಿ.ಬಸವರಾಜು ತಾಕೀತು ಮಾಡಿದರು.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ವತಿಯಿಂದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಅರಿವು ಹಾಗೂ ಕುಂದುಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಿ ಜಾರಿಗೊಳಿಸಲು 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಕಳೆದ 2 ಕಂತುಗಳು ತಾಂತ್ರಿಕ ಕಾರಣದಿಂದಾಗಿ ಬಿಡುಗಡೆಯಾಗಿರಲಿಲ್ಲ. ಶೀಘ್ರದಲ್ಲೇ ಮಹಿಳೆಯರ ಖಾತೆ ಉಳಿದ ಕಂತುಗಳ ಹಣವನ್ನು ಜಮಾಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಡಿಪಿಒ ಅರುಣ್ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 79,138 ಮಹಿಳೆಯರು ಫಲಾನುಭವಿಗಳಾಗಿದ್ದು 367 ದೂರುಗಳಿವೆ. ಹಣ ಪಾವತಿಯಾಗದ ಬಗ್ಗೆ ತಾಂತ್ರಿಕ ಕಾರಣಗಳಿದ್ದು, ಸದರಿ ಸಮಸ್ಯೆಗಳ ನಿವಾರಣೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಜರೂರಾಗಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದಾಗಿ ತಿಳಿಸಿದ್ದಾರೆ.
ಮದ್ದೂರು ತಾಲೂಕು ಆಹಾರ ಇಲಾಖೆಗೆ ಸಂಬಂಧಪಟ್ಟಂತೆ ಅನ್ನಭಾಗ್ಯ ಯೋಜನೆಯಡಿ 8,459.52 ಕ್ವಿಂಟಾಲ್ ಅಕ್ಕಿ ಮತ್ತು 5,639.68 ಕ್ವಿಂಟಾಲ್ ರಾಗಿ ವಿತರಣೆ ಮಾಡಲಾಗಿದ್ದು, ಕರಡಕೆರೆ ಗ್ರಾಮದಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಿದ್ದ ರಾಗಿ ಮತ್ತು ಅಕ್ಕಿಗಳಲ್ಲಿ ಅಪಾರ ಪ್ರಮಾಣದ ಮಣ್ಣು, ಕಲ್ಲು ಮಿಶ್ರಿತ ಪಡಿತರವನ್ನು ಹಿಂಪಡೆದು ನ್ಯಾಯಬೆಲೆ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿರುವುದಾಗಿ ಆಹಾರ ಶಿರಸ್ತೇದಾರ್ ಜ್ಯೋತಿ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಮದ್ದೂರು ತಾಲೂಕಿನಲ್ಲಿ ಆಗಸ್ಟ್ 2023ರಿಂದ ಮಾರ್ಚ್ 2025ರವರೆಗೆ ಸರಾಸರಿ 30,700,750 ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸೆಸ್ಕ್ ಎಇಇ ರಮೇಶ್ ಸಭೆಗೆ ವಿವರಿಸಿದರು.
ಶಕ್ತಿ ಯೋಜನೆಯಡಿ 2023ರ ಜೂನ್‌ನಿಂದ 2025ರ ಜೂನ್ ಅಂತ್ಯದವರೆಗೆ ಸುಮಾರು 26,077.915 ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು ಕೆಎಸ್‌ಆರ್‌ಟಿಸಿ ಸಂಸ್ಥೆ, ಮದ್ದೂರು ಘಟಕಕ್ಕೆ ಸರಿ ಸುಮಾರು 754,307,055 ರೂ.ಗಳ ಆದಾಯ ಬಂದಿರುತ್ತದೆ ಎಂದು ಸಾರಿಗೆ ಅಧಿಕಾರಿ ಚನ್ನಕೇಶವ ಮೂರ್ತಿ ತಿಳಿಸಿದರು.
ಯುವನಿಧಿ ಯೋಜನೆಯಡಿ ಮದ್ದೂರು ತಾಲೂಕಿನಲ್ಲಿ 1066 ಅಭ್ಯರ್ಥಿಗಳು ನೋಂದಣಿಯಾಗಿದ್ದು, 968 ಅಭ್ಯರ್ಥಿಗಳು ಫಲಾನುಭವಿಗಳಾಗಿದ್ದಾರೆ. ಉದ್ದೇಶಿತ ಯೋಜನೆಯನ್ನು ಯುವಕರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿ ಲತಾಶ್ರೀ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸದ್ಬಳಕೆ ಮಾಡಿಕೊಂಡು ಬಂಡವಾಳ ಹೂಡಿ ಕಿರಾಣಿ ಅಂಗಡಿ ತೆರೆದು ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ನೀಡುತ್ತಿರುವ ಮೆಳ್ಳಹಳ್ಳಿ ಗ್ರಾಮದ ಶಿಲ್ಪಾ ವೆಂಕಟೇಶ್ ಮತ್ತು ವೈರ್‌ಬ್ಯಾಗ್ ಹೆಣೆಯುವ ಕರಕುಶಲ ಕೈ ಕಸುಬನ್ನು ಪ್ರಾರಂಭಿಸಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಮಾಡಿ ಆರ್ಥಿಕವಾಗಿ ಸದೃಢರಾಗಿ ಜೀವನ ನಡೆಸುತ್ತಿರುವ ಅಣ್ಣೂರು ಗ್ರಾಮದ ಭಾಗ್ಯಮ್ಮ ರಾಜಾಚಾರಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಸಮಿತಿ ಸದಸ್ಯ ಫೈರೋಜ್ ಖಾನ್, ರಾಜಣ್ಣ, ಭಾನುಪ್ರಕಾಶ್, ಬೋರೇಗೌಡ, ರಾಜು, ರಘುಪತಿ, ಸಿದ್ದಲಿಂಗ ಪ್ರಸಾದ್, ನಾಗಮ್ಮ, ಗೀತಾ, ತಾ.ಪಂ.ಯೋಜನಾಧಿಕಾರಿ ಸುರೇಶ್, ಚಿದಾನಂದ, ಪ್ರೊ. ಬೋರೇಗೌಡ, ಎಸ್ಸಿ ಬ್ಲಾಕ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ ಇತರರಿದ್ದರು.