ಜಿಲ್ಲೆ

ಏಪ್ರೀಲ್‌ನಿಂದ 7 ನೇ ವೇತನ ಆಯೋಗದ ವರದಿ ಜಾರಿ ಮಾಡಿ-ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಒತ್ತಾಯ

ಕಾರವಾರ: ಸರ್ಕಾರ 7 ನೇ ವೇತನ ಆಯೋಗದ ವರದಿಯನ್ನು ಶೀಘ್ರದಲ್ಲಿ ಪಡೆದು, 2024 ರ ಏಪ್ರಿಲ್ 1 ರಿಂದ ಪರಿಷ್ಕೃತ ವೇತನ ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ನೂತನ ಸಭಾಭವನ ಹಾಗೂ ನಿವೃತ್ತ ನೌಕರರ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರ, ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ವೇತನ ಭತ್ಯೆಗಳನ್ನು ಪರಿಷ್ಕರಿಸಲು ಸುಧಾಕರ ರಾವ್ ಸಮಿತಿ ರಚನೆಯಾಗಿ 1 ವರ್ಷವಾಗಿದೆ. ಆಯೋಗವು ಜನವರಿ ಅಂತ್ಯದೊಳಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯ ಮಾಡಲು ಸಂಘದಿಂದ ಕಾರ್ಯಾಗಾರ, ರಾಜ್ಯಮಟ್ಟದ ಸಮಾವೇಶಗಳನ್ನು ಫೆಬ್ರವರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಇತರ ಸಚಿವರನ್ನು ಆಹ್ವಾನಿಸಿ ಒತ್ತಾಯ ಮಾಡಲಾಗುವುದು ಎಂದರು.
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ 4.20 ಲಕ್ಷ ಪಿಂಚಣಿದಾರರಿದ್ದಾರೆ. 1 ಲಕ್ಷ ಕುಟುಂಬಗಳು ಪಿಂಚಣಿ ಪಡೆಯುತ್ತಿವೆ. ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತರಿಗೂ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಬಳಿ ಕಡತ ಇದೆ. ಶೀಘ್ರದಲ್ಲಿ ಕರಡು ಯೋಜನೆಯ ಮುಖ್ಯಮಂತ್ರಿಗಳ ಅವಗಾಹನೆಗೆ ಹೋಗುವ ಸಾಧ್ಯತೆ ಇದೆ ಎಂದರು.
ನೆರೆಯ ಕೆಲವು ರಾಜ್ಯಗಳಲ್ಲಿರುವಂತೆ 70 ರಿಂದ 75 ವರ್ಷ, 80 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಮೂಲ ಪಿಂಚಣಿಯನ್ನು ಶೇ.10 ಹಾಗೂ 15 ರಷ್ಟು ಏರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಂಜೀವಕುಮಾರ ನಾಯ್ಕ, ನಿವೃತ್ತ ನೌಕರರ ಸಂಘದ ಮೇಲ್ಮಹಡಿ ನಿರ್ಮಾಣಕ್ಕೆ ಜಿಲ್ಲಾಧ್ಯಕ್ಷ ವಿ.ಎಂ.ಹೆಗಡೆ ಅವರ ಶ್ರಮ ಅಪಾರ ಎಂದರು.
ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಂಘದ ಖಜಾಂಚಿ ಎಸ್.ಎಂ.ಆನಂದಪ್ಪ, ಪದಾಧಕಾರಿ ಶಾರದಮ್ಮ, ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಸುರೇಶ ಐ.ನಾಯ್ಕ, ಜಿಲ್ಲಾ ಗೌರವ ಅಧ್ಯಕ್ಷ ಶಿವಾನಂದ ಕದಂ, ಉಪಾಧ್ಯಕ್ಷ ಚಂದ್ರಕಾಂತ ದಳವಿ, ಸಿ.ಎಸ್.ಗೌಡರ್, ಖಜಾಂಚಿ ವಿಠೋಭಾ ರಾಣೆ, ವೇದಿಕೆಯಲ್ಲಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ನಾಯ್ಕ ಸ್ವಾಗತಿಸಿದರು. ದೇವಿದಾಸ ಸಾವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. 80 ವರ್ಷ ಪೂರೈಸಿದ ಸಂಘದ 35 ಜನರನ್ನು, ದಾನಿಗಳನ್ನು ಸನ್ಮಾನಿಸಲಾಯಿತು.