ಜಿಲ್ಲೆ

ಕೃಷಿಯಲ್ಲಿ ಸುಧಾರಣ ಕ್ರಮ ಅಳವಡಿಸಿಕೊಳ್ಳಿ

ಬಾಲಮುರಳಿಕೃಷ್ಣ

ಪಾಂಡವಪುರ: ಭತ್ತ ಮತ್ತು ಕಬ್ಬು ಬೆಳೆಯಲ್ಲಿ ಇಳುವರಿ ಕಡಿಮೆಯಾಗುತ್ತಿದ್ದು, ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆಯಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಪರಿಕರ ಮಾರಾಟಗಾರರ ಸಂಘ ಹಾಗೂ ಹಿಪ್ಕೋ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಭತ್ತದ ಸುಧಾರಿತ ಬೇಸಾಯ ಪದ್ದತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆಯಬೇಕಿದೆ. ಬೇಸಾಯದಲ್ಲಿ ರೈತರು ಲಘು ಪೋಷಕಾಂಶಗಳು ಮತ್ತು ಜೈವಿಕ ಗೊಬ್ಬರಗಳನ್ನು ತಪ್ಪದೆ ಬಳಕೆ ಮಾಡಬೇಕು. ಜತೆಗೆ ರೈತ ಉತ್ಪಾದಕ ಸಂಸ್ಥೆಗಳ ಮೂಲಕವೇ ಮಾರಾಟ ಮಾಡಿದರೆ ಮಧ್ಯವರ್ತಿಗಳ ಹಾವಳಿ ತಪ್ಪಿ ಅಧಿಕ ಬೆಲೆ ಸಿಗಲಿದೆ ಎಂದರು.

ಪ್ರಸ್ತುತ ಕೃಷಿಯಲ್ಲಿ ಯಥೇಚ್ಛವಾಗಿ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಹಾಗೂ ಕಳೆನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದರ ಜತೆಗೆ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಾಣು ಹಾಗೂ ಎರೆಹುಳುಗಳು ಸಾವನ್ನಪ್ಪುತ್ತಿವೆ. ಇದರಿಂದ ಪ್ರಕೃತಿಯ ಜತೆಗೆ ಮಾನವನಿಗೂ ಹಾನಿ ಉಂಟಾಗುತ್ತಿದೆ. ಹೀಗಾಗಿ ಇವುಗಳನ್ನು ವಿವೇಚನಾತ್ಮಕವಾಗಿ ಬಳಕೆ ಮಾಡಬೇಕು. ಹರಳು ರೂಪದ ಯೂರಿಯ ಬಳಕೆಯಿಂದ ಹಲವಾರು ದುಷ್ಪರಿಣಾಮಗಳಾಗುತ್ತಿವೆ. ಮಣ್ಣಿನಲ್ಲಿ ಆಮ್ಲಿಯತೆ ಹೆಚ್ಚಿಗೆ ಪರಿಸರದಲ್ಲಿ ಅಂತರ್ಜಲ ಮಾಲಿನ್ಯ ಹಾಗೂ ಯುಟ್ರೋಪ್ರಿಕೇಷನ್ ಹೆಚ್ಚುತ್ತಿದೆ. ನ್ಯಾನೊ ಯೂರಿಯ ಮತ್ತು ಡಿಎಪಿ ಹರುಳು ಯೂರಿಯದ ಗೊಬ್ಬರಕ್ಕಿಂತ 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ಒದಗಿಸುತ್ತದೆ, ರಸಗೊಬ್ಬರ ಬಳಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿ ಮಣ್ಣಿನ ಸುಧಾರಣೆಯಾಗುತ್ತದೆ ಎಂದರು.

ಕೃಷಿ ವಿಶ್ವವಿದ್ಯಾಯಲದ ವಿಜ್ಞಾನಿ ಡಾ.ಸನತ್‌ಕುಮಾರ್ ಮಾತನಾಡಿದರು. ಇದೇ ವೇಳೆ ಡ್ರೋನ್ ಮೂಲಕ ರಸಗೊಬ್ಬರ ಮತ್ತು ಕೀಟನಾಶಕ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು ಹಿಪ್ಕೋ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಇದರ ಬಳಕೆಯಿಂದ ಆಗುವ ಉಪಯೋಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಇತರರು ಇದ್ದರು.