ಅಧಿಕಾರಿಗಳು ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ಕೂರದೆ ತಾಲೂಕು, ಹೋಬಳಿ, ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಕೇಳಬೇಕು. ಆ ಮೂಲಕ ಆಡಳಿತದ ವೈಖರಿ ಬದಲಾಗಬೇಕು. ನಮ್ಮ ಸರ್ಕಾರ ಜಾರಿಗೆ ತಂದಿರುವ, ಮುಂದೆ ತರಲಿರುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಂವಿಧಾನದ ಆಶಯವನ್ನು ಓದುವ ಮೂಲಕ ಪ್ರಗತಿ ಪರಿಶೀಲನಾ ಸಭೆಯನ್ನು ಆರಂಭಿಸಿದರು. ಸತತ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಹೇಗೆ ಕರ್ತವ್ಯ ನಿರ್ವಹಿಸಬೇಕು. ಜನರ ಸಮಸ್ಯೆ ಹೇಗೆ ಆಲಿಸಬೇಕು ಎಂದು ಆಡಳಿತಾತ್ಮಕ ವಿಚಾರದಲ್ಲಿ ನೀತಿಪಾಠ ಬೋಧನೆ ಮಾಡಿದರು. ಕೆಲಸ ಮಾಡದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೂಡ ನೀಡಿದರು.
ಕೆಲಸದ ವಿಚಾರದಲ್ಲಿ ಅಧಿಕಾರಿಗಳು ಕುಂಟು ನೆಪ ಹೇಳಬಾರದು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ದುಡಿಯಬೇಕು. ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ, ಭರವಸೆ ಮೂಡಿಸುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ, ಎಸಿಗಳು, ಎಸ್ಪಿ ಅವರು ತಾಲೂಕು ಕೇಂದ್ರಗಳಿಗೆ ತೆರಳಬೇಕು. ಹಳ್ಳಿಗಳಲ್ಲಿ ವಾಸ್ತವ್ಯ ಹೂಡುವುದು ಮುಖ್ಯವಲ್ಲ, ಹಳ್ಳಿಗಳಲ್ಲಿರುವ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮುಖ್ಯವಾಗಿದೆ ಎಂದು ಸಲಹೆ ನೀಡಿದರು.