ಜಮಖಂಡಿಯಲ್ಲಿ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೇ ನಿಶ್ಚಿತ ಪಿಂಚಣಿ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. 
ಜಿಲ್ಲೆ

ಒಪಿಎಸ್ ಹಳೇ ಪಿಂಚಣಿ ಜಾರಿಗೊಳಿಸಿ

Vijayapura - Desk - Gurappa Lokuri

ಜಮಖಂಡಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಹಳೇ ನಿಶ್ಚಿತ ಪಿಂಚಣಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಆಗ್ರಹಿಸಿದೆ.

ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎಸ್.ಕೆ. ಕರಡಿ, ಉಪಾಧ್ಯಕ್ಷ ಬಿ.ಆರ್. ಖವಟಕೊಪ್ಪ ಮಾತನಾಡಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಆದರೆ, ಆ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ವರ್ಷ ಕಳೆದರೂ ಹಳೇ ಪಿಂಚಣಿ ಜಾರಿ ಬಗ್ಗೆ ಚಕಾರ ಎತ್ತುತ್ತಿಲ್ಲ. ವಿಳಂಬ ನೀತಿ ಅನುಸರಿಸುತ್ತ ಕಾಲ ಹರಣ ಮಾಡುತ್ತಿದೆ. ಈ ತತ್ಸಾರ ಧೋರಣೆಯಿಂದ ಬೇಸತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಈಗ ಮತ್ತೆ ಹೋರಾಟಕ್ಕಿಳಿಯುವಂತೆ ಮಾಡಿದೆ. ಶೀಘ್ರ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.

ಅಸಂಖ್ಯಾತ ನೌಕರರು ಇಂದು ಜಾತಕಪಕ್ಷಿಯಂತೆ ಒಪಿಎಸ್ ಜಾರಿಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ನೀಡಿದ ಭರವಸೆಯಂತೆ ಹಳೇ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು. ಖಾಸಗಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳಲ್ಲಿ 2006ರ ಪೂರ್ವದಿಂದ ಸೇವೆಗೈಯುತ್ತಿರುವ ಮತ್ತು ನಿವೃತ್ತಿ, ನಿಧನರಾಗಿರುವ ನೌಕರರ ಕುಟುಂಬ ಪರಿವಾರದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ವೇತನ ನಿಗದಿಪಡಿಸಿ ಅವರಿಗೂ ಹಳೇ ನಿಶ್ಚಿತ ಪಿಂಚಣಿ ಒಪಿಎಸ್ ಯೋಜನೆಯ ಸೌಲಭ್ಯ ಹಾಗೂ ಇತರೆ ಪಿಂಚಣಿ ಸೌಲಭ್ಯಗಳನ್ನು ನೀಡಬೇಕು. ಅವರ ಕುಟುಂಬದವರಿಗೆ ಜೀವನ ನಿರ್ವಹಣೆಗೆ ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ಹಳೇ ಪಿಂಚಣಿ ಸೌಲಭ್ಯಗಳನ್ನು ಒದಗಿಸುವ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಎಸ್.ಕೆ. ಕರಡಿ, ಎಂ.ಎಚ್. ಪಾರ್ಸನಳ್ಳಿ, ಎಂ.ಎನ್. ಪತ್ತಾರ, ಡಿ.ಆರ್. ಖವಟಕೊಪ್ಪ, ಎನ್.ಎಸ್. ತುಪ್ಪದ, ಎನ್.ವಿ. ದೇಸಾಯಿ, ಕೆ.ಎಚ್. ಸಣಮನಿ, ಬಿ.ಎ. ನರಸಗೌಡರ, ಎಸ್.ವೈ. ಕಮತೆ ಸೇರಿ ಜಮಖಂಡಿ ತಾಲೂಕಿನ ಪಿಂಚಣಿ ವಂಚಿತ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಪದಾಧಿಕಾರಿಗಳು ಪಾಲ್ಗೊಂಡಿದ್ದರು.