ಕೊರಟಗೆರೆ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ, ರಾಜ್ಯ ಸರ್ಕಾರ ಆ.16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ಡಿ.ಎಲ್.ಶಿವರಾಮ್ ಒತ್ತಾಯಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಆಯೋಗವನ್ನು ರಚಿಸಿ ವರದಿಯನ್ನು ಸ್ವೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ವಿಳಂಬ ಮಾಡದೆ, ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ, ಮೀಸಲಾತಿ ಜಾರಿಗೆ ಜನಾಂದೋಲನ, ಪ್ರತಿಭಟನೆ, ತಮಟೆ ಚಳವಳಿಯಂತಹ ಹಲವು ಹೋರಾಟಗಳನ್ನು ಮಾಡಿದ್ದೇವೆ. ಬಲಗೈ ಜನಾಂಗದ ಸಹೋದರರು ಮೈಸೂರಿನ ಸ್ವಾಮೀಜಿಯೊಬ್ಬರ ಮೂಲಕ ಒಳಮೀಸಲಾತಿ ಜಾರಿಗೆ ವಿವಿಧಾತ್ಮಕ ಹೇಳಿಕೆ ನೀಡಿದ್ದಾರೆ. ಇದು ತರವಲ್ಲ, ದತ್ತಾಂಶಗಳ ವರದಿ ಆಧಾರದ ಮೇಲೆ ಮೀಸಲಾತಿ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಪ್ರತಿ ರಾಜ್ಯ ಸರ್ಕಾರ ಪ.ಜಾತಿಯ ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೊರ ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಗೆ ಬಂದಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳಮೀಸಲಾತಿ ಜಾರಿಗೆ ಬಂದಿಲ್ಲ ಎಂದು ಕುಟುಕಿದರು.
ಚುನಾವಣೆಯ ಪ್ರಣಾಳಿಕೆಯ ಅಧ್ಯಕ್ಷೆತೆ ವಹಿಸಿದ್ದ ಡಾ.ಜಿ ಪರಮೇಶ್ವರ ಅವರು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಪ.ಜಾತಿ ದತ್ತಾಂಶ ಸಂಗ್ರಹಣೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸಂಗ್ರಹಣೆ ಮಾಡಿದೆ. ಮೈಸೂರಿನ ಶ್ರೀಗಳು ಸಮುದಾಯದ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆಯಬೇಕು. ದತ್ತಾಂಶ ಸಂಗ್ರಹಣೆಯ ಆಧಾರದ ಮೇಲೆ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕಿದೆ. | ಜೆಟ್ಟಿ ಅಗ್ರಹಾರ ನಾಗರಾಜು, ರಾಜ್ಯ ಸಂಚಾಲಕ, ದಲಿತ ಸಂರಕ್ಷಣಾ ಸಮಿತಿ