ಮೈಸೂರು: ಬಲಿಷ್ಠ ಕೋಮುಗಳ ನಿಯಂತ್ರಣದಲ್ಲಿರುವ ಕಾರಣ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೇಗ ಕಡಿಮೆಯಾಗಿದೆ, ಹಾಗಾಗಿ ಅವರು ಜಾತಿಗಣತಿ ವರದಿ ಜಾರಿ ಕುರಿತಂತೆ ದೃಢ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ, ಸಿದ್ದರಾಮಯ್ಯ ಇದರಿಂದ ಹೊರಬಂದು ಕೂಡಲೇ ವರದಿ ಜಾರಿಗೆ ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಆಗ್ರಹಿಸಿದರು.
ಹಿಂದುಳಿದ ವರ್ಗಗಳಿಗೆ, ಎಸ್‌ಸಿ, ಎಸ್‌ಟಿಗಳಿಗೆ ನೀಡಿರುವ ಸೌಲಭ್ಯ ಬಲಿಷ್ಠ ಕೋಮುಗಳ ಹಿಡಿತದಿಂದಾಗಿ ಲಭ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ಸರ್ಕಾರ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 80 ಸಾವಿರ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿಯಾಗಿಯೇ ಇವೆ. ಶಿಕ್ಷಣ ಇಲಾಖೆಯಲ್ಲಿ ಶೇ.75ರಷ್ಟು ತಾತ್ಕಾಲಿಕ ಅತಿಥಿ ಶಿಕ್ಷಕರಿಂದ ಬೋಧನೆ ಮಾಡಿಸಲಾಗುತ್ತಿದೆ. ಕಾಲೇಜು ಅಧ್ಯಾಪಕರ ಹುದ್ದೆಗಳಿಗೆ ಅರ್ಹತೆ ಪಡೆದಿರುವವರು ನೇಮಕಾತಿ ಇಲ್ಲದೆ ಬೀದಿಪಾಲಾಗಿದ್ದಾರೆ. ಹೀಗಾಗಿ ಕೂಡಲೇ ಅವರ ಸೇವೆ ಕಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆಂಪಶೆಟ್ಟಿ, ರಮೇಶ್, ದಾಸಪ್ಪಶೆಟ್ಟಿ, ಶಿವರಾಜು ಇದ್ದರು.