ಮಡಿಕೇರಿ: ಸಾಮಾಜಿಕ ಸೇವಾ ಸಂಸ್ಥೆಯಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರೋಟರಿ ಸಂಸ್ಥೆಯು ವಿನೂತನ ಸೇವಾ ಕಾರ್ಯಯೋಜನೆಗಳೊಂದಿಗೆ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರಬೇಕೆಂದು ರೋಟರಿ ಜಿಲ್ಲೆ ೩೧೮೧ನ ಮಾಜಿ ಗವರ್ನರ್ ಎಚ್.ಆರ್.ಕೇಶವ್ ಕರೆ ನೀಡಿದರು.
ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಬುಧವಾರ ರೋಟರಿ ಮಿಸ್ಟಿ ಹಿಲ್ಸ್‌ನ ೨೦೨೫-೨೬ನೇ ಸಾಲಿನ ಅಧ್ಯಕ್ಷ ರತ್ನಾಕರ್ ರೈ ಮತ್ತು ಕಾರ್ಯದರ್ಶಿ ಕಾರ್ಯಪ್ಪ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಒಳಿತಿಗಾಗಿ ಒಗ್ಗೂಡು ಎಂಬ ಸಂದೇಶದಡಿಯಲ್ಲಿ ಈ ವರ್ಷ ರೋಟರಿ ಸಂಸ್ಥೆಗಳು ಕಾರ್ಯನಿರ್ವಹಿಸಲಿದೆ. ಪ್ರತೀ ರೋಟರಿ ಸಂಸ್ಥೆಯೂ ಹೊಸ ಚಿಂತನೆ ಅಳವಡಿಸಿಕೊಂಡು ಜನರ ಮನಸ್ಸಿನಲ್ಲಿ ಸದಾ ಸ್ಮರಣೀಯವಾಗುವಂಥ ಕಾರ್ಯಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ನೀಡಿದ ಕೇಶವ್, ರೋಟರಿ ಸಂಸ್ಥೆಗಳು ನೀಡುವ ನೆರವಿನ ಯೋಜನೆಗಳು ಸತ್ಪಾತ್ರರಿಗೆ ದೊರಕುವಂತೆ ಗಮನ ಹರಿಸಬೇಕು. ಯಾವುದೇ ಯೋಜನೆ ಅಗತ್ಯವುಳ್ಳವರಿಗೆ ದೊರಕದೆ ವ್ಯರ್ಥವಾಗಬಾರದೆಂದು ನುಡಿದರು.
ರೋಟರಿ ವಲಯ ೬ರ ಸಹಾಯಕ ಗರ್ವನರ್ ಪಿ.ಎಂ.ಧಿಲನ್ ಚಂಗಪ್ಪ ಅವರು ರೋಟೋ ಮಿಸ್ಟ್ ವಾರ್ತಾ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ, ಮಹಿಳಾ ಸ್ವಾವಲಂಭಿ ಯೋಜನೆ, ಅಂಗನವಾಡಿಗಳಿಗೆ ಕಾಯಕಲ್ಪ ಸೇರಿದಂತೆ ಈ ವರ್ಷದಲ್ಲಿ ೧೧ ಜಿಲ್ಲಾ ಯೋಜನೆಗಳನ್ನು ೮೬ ರೋಟರಿ ಸಂಸ್ಥೆಗಳು ರೋಟರಿ ಜಿಲ್ಲೆಯಾದ್ಯಂತ ಜಾರಿಗೊಳಿಸಲಿವೆ ಎಂದು ಮಾಹಿತಿ ನೀಡಿದರು.
ರೋಟರಿಯ ವಲಯ ಸೇನಾನಿ ಕೆ.ಸಿ.ಕಾರ್ಯಪ್ಪ ಮೇಕೇರಿ ಮತ್ತು ಅಪ್ಪಂಗಳ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮಡಿಕೇರಿಯ ಉದ್ಯಮಿ ಹರೀಶ್ ಕುಮಾರ್ ಸಹಯೋಗದಲ್ಲಿ ನೀಡಲಾದ ಆಟಿಕೆ, ಹಾಸಿಗೆ, ಕುರ್ಚಿ, ಕುಕ್ಕರ್, ತಟ್ಟೆಗಳು, ನೀರಿನ ಘಟಕಗಳನ್ನು ವಿತರಿಸಿದರು.
ರೋಟರಿ ಮಿಸ್ಟಿ ಹಿಲ್ಸ್‌ನ ನೂತನ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ೨೦ ವರ್ಷಗಳ ಇತಿಹಾಸ ಹೊಂದಿರುವ ಮಿಸ್ಟಿ ಹಿಲ್ಸ್‌ನಲ್ಲಿ ೬೫ ಸದಸ್ಯರಿದ್ದು, ಎಲ್ಲರ ಸಹಕಾರದೊಂದಿಗೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ನಿಕಟಪೂರ್ವ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್, ಎ.ಕೆ.ವಿನೋದ್, ಸತೀಶ್ ಸೋಮಣ್ಣ, ರಶ್ಮಿದೀಪಾ, ಡಾ.ಚೇತನ್, ಗಾನಾ ಪ್ರಶಾಂತ್ ಇತರರಿದ್ದರು.
ಸಾಧಕರಿಗೆ ಸನ್ಮಾನದ ಗೌರವ
ಯೋಗದಲ್ಲಿನ ಡಿಂಬಾಸನವನ್ನು ೩೦ ನಿಮಿಷ ೫ ಸೆಕೆಂಡ್ ಕಾಲ ಒಂದೇ ಭಂಗಿಯಲ್ಲಿ ನಿಂತು ಗಿನ್ನೀಸ್ ವಿಶ್ವದಾಖಲೆ ಮಾಡಿದ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾ ಹಾಗೂ ರಾಜ್ಯಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಎಂ.ಎನ್.ತನ್ಮಯಿ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಆರ್.ಕೇಶವ್ ಸನ್ಮಾನಿಸಿ ಗೌರವಿಸಿದರು. ತನ್ಮಯಿ ತಂದೆ ವಕೀಲ ಎಂ.ಎ.ನಿರಂಜನ್, ಸಿಂಚನಾ ಪಾಲಕರಾದ ಕೀರ್ತಿಕುಮಾರ್ ಮತ್ತು ರೇಣುಕಾ ಹಾಜರಿದ್ದರು.