ಪಾಂಡವಪುರ: ಪಟ್ಟಣದ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿದ್ದ ಜಮೀನು ಸರ್ವೇ ನಡೆಸಿ ಹದ್ದುಬಸ್ತು ಗುರುತಿಗಾಗಿ ನೆಟ್ಟಿದ್ದ ಕಲ್ಲುಕಂಬ ಹಾಗೂ ನಾಮಫಲಕವನ್ನು ಕಿತ್ತೆಸೆದಿರುವ ಘಟನೆ ನಡೆದಿದ್ದು, ಈ ಸಂಬಂಧ ಪುರಸಭೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಒಳಚರಂಡಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಪಟ್ಟಣದ ಬನ್ನಾರಮ್ಮ ದೇವಸ್ಥಾನದ ಮುಂಭಾಗ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 2009ರಲ್ಲಿ ರೈತರ 5.20 ಎಕರೆ ಸ್ವಾಧೀನಪಡಿಸಿಕೊಂಡು ಪ್ರತಿ ಗುಂಟೆ ಜಮೀನಿಗೆ ಇಂತಿಷ್ಟು ಎಂದು ಪರಿಹಾರ ನಿಗದಿಗೊಳಿಸಿತ್ತು. ಮಂಡಳಿ ನಿಗದಿಗೊಳಿಸಿದ ಪರಿಹಾರದ ಮೊತ್ತಕ್ಕೆ ಒಪ್ಪದ ಜಮೀನು ಮಾಲೀಕರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ರೈತರ ಮನವಿ ಆಲಿಸಿದ ನ್ಯಾಯಾಲಯ ಒಳಚರಂಡಿ ಮಂಡಳಿ ನಿಗದಿ ಮಾಡಿದ್ದ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸಿತ್ತು. ಅದರಂತೆ ರೈತರಿಗೆ ಪರಿಹಾರ ಮೊತ್ತ ಸಿಗಲಿದೆ. ಈ ನಡುವೆ ಸ್ವಾಧೀನಕ್ಕೊಳಪಟ್ಟಿರುವ ಜಮೀನಿನ ವಿಚಾರವಾಗಿ ರೈತರ ನಡುವೆ ಗೊಂದಲ ಏರ್ಪಟ್ಟಿದ್ದು, ಸ್ವಾಧೀನಕ್ಕೆ ಒಳಪಟ್ಟಿರುವ ಜಮೀನು ನಮಗೆ ಸೇರಿದ್ದು, ನಮಗೆ ಪರಿಹಾರದ ಮೊತ್ತ ಸಿಗಬೇಕು ಎಂದು ರೈತರು ಹಠಕ್ಕೆ ಬಿದ್ದಿರುವ ಪರಿಣಾಮ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಹಿನ್ನಡೆಯಾಗಿದೆ.
ಕಳೆದ ಮಾ.3 ರಂದು ಪುರಸಭೆ ಅಧಿಕಾರಿಗಳು ಜಮೀನು ಸರ್ವೇಗೆ ತೆರಳಿದ್ದ ವೇಳೆ ಸ್ವಾಧೀನಕ್ಕೆ ಒಳಪಡುವ ಜಮೀನು ವಿಚಾರವಾಗಿ ಇಬ್ಬರು ರೈತರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಒಬ್ಬರು ಜಮೀನು ಸರ್ವೇ ಮಾಡಬೇಕು ಎಂದರೆ ಮತ್ತೊಬ್ಬರು ಯಾವುದೇ ಕಾರಣಕ್ಕೂ ಸರ್ವೇಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಸರ್ವೇ ನಡೆಸದೆ ವಾಪಸಾಗಿದ್ದರು.
ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ಮೇರೆಗೆ ಭೂ ಮಾಪನ ಇಲಾಖೆ ಮತ್ತು ಪುರಸಭೆಯ ಕಂದಾಯ ಅಧಿಕಾರಿಗಳು ಜೂ.21 ರಂದು ಸರ್ವೇ ನಡೆಸಿ ಸ್ವಾಧೀನಕ್ಕೆ ಒಳಪಟ್ಟಿದ್ದ ಜಮೀನಿನ ಗಡಿ ಗುರುತಿಸಿ ಜೂ.26 ರಂದು ಕಲ್ಲುಕಂಬ ನೆಟ್ಟು, ಪುರಸಭೆಗೆ ಸೇರಿದ ಆಸ್ತಿ, ಎಸ್‌ಟಿಪಿ ಪ್ಲಾಂಟ್ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗ ಎಂದು ನಾಮಫಲಕ ಅಳವಡಿಸಿದ್ದರು. ಜೂ.28ರಂದು ಅಧಿಕಾರಿಗಳು ನೆಟ್ಟಿದ್ದ ಕಲ್ಲುಕಂಬ ಹಾಗೂ ನಾಮಫಲಕ ಕಿತ್ತು ಹಾಕಲಾಗಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಪಾಂಡವಪುರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.