ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಅಪಾರ ಪ್ರಮಾಣದ ನೀರು ಕೃಷ್ಣೆಗೆ ಹರಿದು ಬರುತ್ತಿದೆ.
ಭಾನುವಾರ ಸಂಜೆ ಕೃಷ್ಣಾ ನದಿ ನೀರಿನ ಮಟ್ಟ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ದಡದ ಜನರು ಜಾಗ್ರತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವ ಸಿದ್ಧತೆ ನಡೆಸಿದ್ದಾರೆ. ಎರಡು ತಿಂಗಳಿಂದ ಸಂಪೂರ್ಣ ಖಾಲಿ ಆಗಿದ್ದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜನತೆಯಲ್ಲಿ ಮಂದಹಾಸ ಮೂಡಿದೆ.
ಸದ್ಯ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 92,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಕೃಷ್ಣೆಗೆ ಹರಿಬಿಡಲಾಗುತ್ತಿದೆ. ಜಲಾಶಯದಲ್ಲಿ 520.90 ಮೀ. ವರೆಗೆ ನೀರಿದೆ ಎಂದು ತಾಲೂಕಿನ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಯ್ನದಲ್ಲಿ 158 ಮಿ.ಮೀ., ನೌಜಾದಲ್ಲಿ 183 ಮಿ.ಮೀ., ಮಹಾಬಳೇಶ್ವರದಲ್ಲಿ 141 ಮಿ.ಮೀ., ತರಳಿಯಲ್ಲಿ 50 ಮಿ.ಮೀ., ವಾರಣಾದಲ್ಲಿ 96 ಮಿ.ಮೀ., ರಾಧಾನಗರಿಯಲ್ಲಿ 211 ಮಿ.ಮೀ., ದೂದಗಂಗಾದಲ್ಲಿ 108 ಮಿ. ಮೀ. ಮಳೆಯಾದ ಬಗ್ಗೆ ವರದಿಯಾಗಿದೆ. ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣೆಗೆ 72,208 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಅಭಿಯಂತರ ವಿಠ್ಠಲ ನಾಯಕ ತಿಳಿಸಿದ್ದಾರೆ.