ಎನ್.ಆರ್.ಪುರ: ಭಗವದ್ಗೀತೆ ಪಠಣ ಮಾಡುವುದರಿಂದ ಅಪಾರ ಜ್ಞಾನ, ವಿದ್ವತ್ ಸಿಗಲಿದೆ ಎಂದು ವಿಶ್ವಕರ್ಮ ಸಮಾಜ ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಭಾಸ್ಕರಾಚಾರ್ಯ ತಿಳಿಸಿದರು.
ಭಾನುವಾರ ಸಿಂಸೆಯಲ್ಲಿ ಶೃಂಗೇರಿ ಕ್ಷೇತ್ರಮಟ್ಟದ ಸ್ವಾಮಿ ಆದಿ ದೇವಾನಂದರ ಶ್ರೀಮದ್ ಭಗವದ್ಗೀತಾ ಕೃತಿ ಮೇಲೆ ವಿಶ್ವ ಕರ್ಮ ಸಮಾಜದವರಿಗಾಗಿ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಸಪ್ರಶ್ನೆ ಸ್ಪರ್ಧೆಗಾಗಿ ಎಲ್ಲರಿಗೂ ಭಗವದ್ಗೀತೆ ಪುಸ್ತಕ ನೀಡಿದ್ದೇವೆ. ಭಗವದ್ಗೀತೆ ಪುಸ್ತಕವನ್ನು ಓದಿದರೆ ನಮಗೆ ಭೌತಿಕವಾಗಿ, ಆಧ್ಯಾತ್ಮಿಕ ಉತ್ತಮ ಚಿಂತನೆ ಬರಲಿದೆ. ಮುಂದಿನ ಜೀವನವನ್ನು ಸರಿಯಾದ ಮಾರ್ಗದಲ್ಲಿ ರೂಪಿಸಿಕೊಳ್ಳಲು ಸ್ಫೂರ್ತಿ ಬರಲಿದೆ ಎಂದರು.
ಪ್ರತಿ ನಿತ್ಯ ಭಗವದ್ಗೀತೆಯನ್ನು ಓದಬೇಕು. ಗಾಯತ್ರಿ ಮಂತ್ರ ಹೇಳುವಾಗ, ಭಗವದ್ಗೀತೆ ಪಠಿಸುವಾಗ ಪ್ರೇರಣೆ ದೊರೆಯಲಿದೆ. ನಮ್ಮ ದೇಹದಲ್ಲಿ ಆತ್ಮ, ಪರಮಾತ್ಮ ಇದ್ದಾನೆ. ಪ್ರತಿ ನಿತ್ಯ ಭಗವದ್ಗೀತೆ ಪಠಣ ಮಾಡಬೇಕು ಎಂದು ಶ್ರೀಕೃಷ್ಣ ಹೇಳಿದ್ದಾನೆ. ಯುವ ಪೀಳಿಗೆಗೆ ಭಗವದ್ಗೀತೆ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂಬುದು ರಸಪ್ರಶ್ನೆ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ ಮಾತನಾಡಿ, ಭಗವದ್ಗೀತೆ ಸಾರಾಂಶಗಳು ಸಮಾಜದ ಎಲ್ಲರಿಗೂ ಮುಟ್ಟಬೇಕು ಎಂಬುದೇ ಉದ್ದೇಶವಾಗಿದೆ. ಭಗವದ್ಗೀತೆ ಕಲಿಯಬೇಕು ಎಂಬ ತುಡಿತ ನಮ್ಮ ಸಮಾಜ ಬಾಂಧವರಿಗಿದೆ. 100 ಭಗವದ್ಗೀತೆ ಪುಸ್ತಕವನ್ನು ಈ ಮೊದಲೇ ರಸಪ್ರಶ್ನೆಯಲ್ಲಿ ಹೆಸರು ನೋಂದಾಯಿಸದವರಿಗೆ ವಿತರಿಸಲಾಗಿದೆ. ಸಮಾಜ ಬಾಂಧವರು ನಮ್ಮ ಕಾರ್ಯಕ್ರಮಗಳಿಗೆ ಸ್ಪಂದಿಸಿ ಭಾಗವಹಿಸಬೇಕು. ಬಹುಮಾನ ಬರುತ್ತದೆ ಎಂಬುದಕ್ಕಿಂತ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ ಎಂದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಉಪಾಧ್ಯಕ್ಷ ಕಿಶೋರ್ ಪೇಜಾವರ್, ಚಿಕ್ಕಮಗಳೂರು ಬಿಎಸ್‌ಎನ್‌ಎಲ್ ಅಧಿಕಾರಿ ಪರಮೇಶ್ವರ ಆಚಾರ್ಯ, ತೀರ್ಪುಗಾರರಾದ ಶೋಭಾ ಆಚಾರ್ಯ, ಹರಿಹರಪುರ ಪಶು ವೈದ್ಯಾಧಿಕಾರಿ ಅರವಿಂದ ಆಚಾರ್ಯ, ತಾಲೂಕು ಅಧ್ಯಕ್ಷ ರಾಜೇಶ ಆಚಾರ್ಯ, ಗಾಯತ್ರಿ ಮಹಿಳಾ ವಿಶ್ವ ಸಮಾಜ ಸೇವಾ ಸಂಘದ ಅಧ್ಯಕ್ಷೆ ಜಯಶ್ರೀ ಆಚಾರ್ಯ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಚಾರ್ಯ, ಚಿಕ್ಕಮಗಳೂರು ಅಂಚೆ ಇಲಾಖೆ ಅಧಿಕಾರಿ ಸತೀಶ್ ಆಚಾರ್ಯ, ಶೃಂಗೇರಿ ಕ್ಷೇತ್ರದ ಸಹ ಕಾರ್ಯದರ್ಶಿ ವೆಂಕಪ್ಪ ಆಚಾರ್ಯ, ನಿವೃತ್ತ ವಲಯ ಅರಣ್ಯಾಧಿಕಾರಿ ಲಿಂಗಪ್ಪ ಆಚಾರ್ಯ, ಶೃಂಗೇರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ನವೀನ್ ಆಚಾರ್ಯ ಇದ್ದರು.