ವಿಜಯವಾಣಿ ಸುದ್ದಿಜಾಲ ಧಾರವಾಡ
ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಮೈಕ್ರೋ ಫೈನಾನ್ಸ್, ಫೈನಾನ್ಸ್ ಕಾರ್ಪೊರೇಶನ್ಸ್, ಲೇವಾದೇವಿಗಾರರು, ಗಿರವಿದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಕ್ರೋ ಫೈನಾನ್ಸ್ಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಪ್ರಕಾರ ವ್ಯವಹರಿಸಬೇಕು. ಸಾಲದ ಕಾರಣಕ್ಕೆ ಜೀವ ಹಾನಿ ಆಗಬಾರದು. ಕಾನೂನು ಚೌಕಟ್ಟಿನಲ್ಲಿ ಸಾಲ ವಸೂಲಾತಿ ಆಗಬೇಕು. ಮರುಪಾವತಿ ಹೆಸರಲ್ಲಿ ತೊಂದರೆ ನೀಡಿರುವ ದೂರು ಬಂದಲ್ಲಿ ಕ್ರಮ ಜರುಗಿಸಲಾಗುತ್ತದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಿಸಬೇಕು. ನಿಯಮ ಮೀರಿ ಸಾಲ ನೀಡಿ ದಬ್ಬಾಳಿಕೆ ನಡೆಸಿದಲ್ಲಿ ಅದಕ್ಕೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದರು.
ಸಾಲ ವಸೂಲು ಮಾಡುವವರು ಸಾಲಗಾರರ ಜತೆಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು. ವ್ಯಾಪಾರದ ದೃಷ್ಟಿಯಿಂದ ನಡೆದುಕೊಂಡಿದ್ದು ಕಂಡುಬಂದರೆ, ಸ್ವಯಂ ಪ್ರೇರಿತ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿ ಕ್ರಮವಹಿಸಿರುವ ಬಗ್ಗೆ ಈಗಾಗಲೇ ನಗರದಲ್ಲಿ ಒಂದು ಮತ್ತು ಗ್ರಾಮೀಣದಲ್ಲಿ 2 ಪ್ರಕರಣಗಳು ದಾಖಲಾಗಿವೆ ಎಂದರು.
ಜಿಲ್ಲೆಯಲ್ಲಿ ಸಾಲ ವಸೂಲಾತಿಗೆ ಕಿರುಕುಳ ನೀಡಿದರೆ ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ( 0836-2445508) ಅಥವಾ ಟೋಲ್ ಫ್ರೀ (1077) ಗೆ ಮಾಹಿತಿ ನೀಡಬಹುದು. ಮಾಹಿತಿದಾರರು ಬಯಸಿದಲ್ಲಿ ಅವರ ವಿವರಗಳನ್ನು ಗೌಪ್ಯವಾಗಿಟ್ಟು ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಆರ್ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಮಾತನಾಡಿದರು. ಜಿಲ್ಲಾ ಅಗ್ರಣಿಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ, ಸಹಕಾರಿ ಸಂಘಗಳ ಉಪನಿಬಂಧಕ ರಮೇಶ ಬಗಲಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿಗಳು, ತಹಸೀಲ್ದಾರರು, ಸಹಾಯಕ ನಿಬಂಧಕರು, ಮೈಕ್ರೋ ಫೈನಾನ್ಸ್ದಾರರು, ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಲೇವಾದೇವಿದಾರರು, ಗಿರಿವಿದಾರರು, ಇತರರು ಇದ್ದರು.