ಜಿಲ್ಲೆ

ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿ

Chitradurga

ಐಮಂಗಲ: ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆ ಸುರಿದಿದ್ದರಿಂದ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ.

ಗ್ರಾಮದ ಬಸವರಾಜು ಎಂಬುವವರ ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ. ಆನಂದಪ್ಪ ಎಂಬುವವರ ತೋಟದಲ್ಲಿ ತೆಂಗು, ಅಡಕೆ, 2 ಮಾವು, ಸಪೋಟ ಮರಗಳು ಧರೆಗುರುಳಿವೆ.

ಮರಡಿಹಳ್ಳಿ ಗೊಲ್ಲರಹಟ್ಟಿಯ ರಾಮಚಂದ್ರಪ್ಪ ಎಂಬುವವರ ಫಸಲಿಗೆ ಬಂದಿದ್ದ ಬಾಳೆಗಿಡಗಳು ಮುರಿದು ಬಿದ್ದಿವೆ. ರಂಗಸ್ವಾಮಿ ಎಂಬುವವರ 50 ಅಡಕೆ, 5 ತೆಂಗು ಹಾಗೂ ಬೇವಿನ ಮರಗಳು ಮುರಿದು ಬಿದ್ದಿವೆ.

ತಾಳವಟ್ಟಿ ಗ್ರಾಮದ ಲತಾ ಎಂಬುವವರ ಮನೆ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಬಂಡ್ಲೂರಹಟ್ಟಿಯ ಜೋಗಪ್ಪ ಎಂಬುವವರ ಜಮೀನಿನಲ್ಲಿ ಹಾಕಿಕೊಂಡಿದ್ದ ಶೀಟ್‌ನ ಶೀಟ್ ಸಹ ಹಾಳಾಗಿವೆ.

ತಾಳವಟ್ಟಿ ರಸ್ತೆಯಲ್ಲಿ ನಿರ್ಮಿಸಿರುವ ಶಡ್‌ನಲ್ಲಿ ಸಂಗ್ರಹಿಸಿದ್ದ ಕೆ.ದ್ಯಾಮಣ್ಣ ಎಂಬುವವರ ಎರಡು ಸಾವಿರ ಈರುಳ್ಳಿ ಚೀಲಗಳನ್ನು ಮಾರುಕಟ್ಟೆಗೆ ಸಾಗಿಸಲು ಲಾರಿಗೆ ಲೋಡ್ ಮಾಡುವಾಗ ಜೋರಾಗಿ ಗಾಳಿ ಬೀಸಿದ್ದರಿಂದ ಶೆಡ್ ಸಂಪೂರ್ಣ ಕುಸಿದು ಲಾರಿ ಸಹಿತ ಈರುಳ್ಳಿ ಚೀಲಗಳು ಮುಚ್ಚಿ ಹೋಗಿವೆ.

ಬಷೀರ್‌ಸಾಬ್ ಅವರ ಜಮೀನಿನಲ್ಲಿ ಹಾಕಲಾಗಿದ್ದ ಶೆಡ್ ಶೀಟ್‌ಗಳು ಹಾರಿಹೋಗಿವೆ. ಐಮಂಗಲದ ಜನತಾ ಕಾಲನಿಯ ಅಂಗನವಾಡಿ ಮುಂಭಾಗದ ವಿದ್ಯುತ್ ತಂತಿಗಳ ಮೇಲೆ ಬೇವಿನ ಮರದ ಕೊಂಬೆ ಬಿದ್ದು ಕಂಬ ನೆಲ ಕಚ್ಚಿದೆ.

ಪ್ರಭಾರ ಕಂದಾಯ ನಿರೀಕ್ಷಕ ಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಹಳಷ್ಟು ವಿದ್ಯುತ್ ಕಂಬಗಳು, ಗಿಡ ಮರಳು ಧರೆಗುರುಳಿವೆ. ಇದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ತಾಳವಟ್ಟಿ ರಸ್ತೆಯಲ್ಲಿ ವಿದ್ಯುತ್ ಕಂಬದ ಬಿದಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು.