ಜಿಲ್ಲೆ

ಇಸ್ಲಾಂಪುರದಲ್ಲಿ ಇನ್ನು ಅಭಿವೃದ್ಧಿ ಪರ್ವ

ಧನಂಜಯ ಎಸ್.ಹಕಾರಿ.

ಕೆ.ಕೆಂಚಪ್ಪ ಮೊಳಕಾಲ್ಮೂರು
ನಿರ್ಲಕ್ಷೃಕ್ಕೊಳಗಾಗಿದ್ದ ತಾಲೂಕಿನ ಇಸ್ಲಾಂಪುರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 3.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಗ್ರಾಮ ಹೊಸ ರೂಪ ಪಡೆದುಕೊಳ್ಳಲಿದೆ.

ಮೊಳಕಾಲ್ಮೂರಿಗೆ ಕೂಗಳತೆ ದೂರದಲ್ಲಿರುವ ಇಸ್ಲಾಂಪುರದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಬೀದಿ ದೀಪ ಅಳವಡಿಕೆ ಕಾಮಗಾರಿಗಳು ಶುರುವಾಗಿದ್ದು, ಒಂದೆರಡು ತಿಂಗಳಲ್ಲಿ ಇಡೀ ಗ್ರಾಮದ ಚಿತ್ರಣ ಬದಲಾಗಲಿದೆ.

1958ರಲ್ಲಿ ಒಂದು ಕುಟುಂಬದಿಂದ ಜನ್ಮತಾಳಿದ ಈ ಊರು ಕಾಲಕ್ರಮೇಣ 200ಕ್ಕೂ ಹೆಚ್ಚು ಕುಟುಂಬಗಳುಳ್ಳ 400ಕ್ಕೂ ಹೆಚ್ಚಿನ ಜನಸಂಖ್ಯೆಯ ಗ್ರಾಮವಾಗಿ ಬೆಳೆದಿದೆ.

ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಊರಿನಲ್ಲಿ ಅನ್ಯ ಸಮುದಾಯದವರೂ ನೆಲೆ ಕಂಡುಕೊಂಡು ಸೌಹರ್ದವಾಗಿ ಬದುಕು ಕಟ್ಟಿಕೊಂಡಿದ್ದು, ಮಾದರಿ ಗ್ರಾಮವಾಗಿದೆ.

ಇಷ್ಟು ದಿನ ಮಣ್ಣಿನ ರಸ್ತೆ, ಹದಗೆಟ್ಟ ಚರಂಡಿಗಳಿಂದ ಕೂಡಿತ್ತು. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿತ್ತು. ಈಗ ಕಾಲ ಕೂಡಿ ಬಂದಿದೆ.

ಕುಗ್ರಾಮಗಳು ಹಾಗೂ ಅಲ್ಪಾಸಂಖ್ಯಾತರು ವಾಸಿಸುವ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ. ಇಸ್ಲಾಂಪುರ, ನಾಗಸಮುದ್ರ ಗ್ರಾಮಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ. ಅದೇ ರೀತಿ ರಾಂಪುರ, ಕರಡಿಹಳ್ಳಿ, ಭಟ್ರಹಳ್ಳಿ, ತುಮಕೂರ‌್ಲಹಳ್ಳಿ, ಉಡೇವು, ಮೊಳಕಾಲ್ಮೂರು ಪಟ್ಟಣದ ಮುಸ್ಲಿಂ ವಸತಿ ಪ್ರದೇಶದ ಅಭಿವೃದ್ಧಿಗೆ 5 ಕೋಟಿ ಅನುದಾನ ಕೋರಿ ಸಚಿವರಿಗೆ ಪತ್ರ ಬರೆಯಲಾಗಿದೆ.ಎನ್.ವೈ.ಗೋಪಾಲಕೃಷ್ಣ, ಶಾಸಕಇಷ್ಟು ದಿನ ಅಭಿವೃದ್ಧಿ ವಂಚಿತ ಊರು ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿತ್ತು. ಕುಗ್ರಾಮದ ಪರಿಸ್ಥಿತಿ ಅರಿತು ದೊಡ್ಡ ಮೊತ್ತದ ಅನುದಾನ ಮಂಜೂರಾಗಿದೆ. ಸರ್ಕಾರಿ ಶಾಲೆಗೆ ಕಾಯಕಲ್ಪವಾಗಬೇಕಿದೆ. ಸಮುದಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕ ಅಗತ್ಯವಿದೆ.ಇಮಾಮ್ ಹುಸೇನ್, ಗ್ರಾಪಂ ಸದಸ್ಯ