ಜಿಲ್ಲೆ

ಐಎಂಎ ಪರಿಹಾರದ ಆಪ್ ತಿಂಗಳು ವಿಳಂಬ!: ಹೂಡಿಕೆದಾರರ ಆಧಾರ್ ಲಿಂಕ್​ಗೆ ಅನುಮತಿ ಸಿಕ್ಕಿಲ್ಲ |ಕರೊನಾ ಹಿನ್ನೆಲೆ ಪರಿಹಾರ ಮತ್ತಷ್ಟು ತಡ

kumarvrl

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಕ್ಷಮ ಪ್ರಾಧಿಕಾರ ರೂಪಿಸಲು ಮುಂದಾಗಿರುವ ಹೊಸ ಆಪ್ ಕಾರ್ಯರೂಪಕ್ಕೆ ಬರಲು ಇನ್ನೂ ಒಂದು ತಿಂಗಳು ವಿಳಂಬವಾಗಲಿದೆ.

ಐಎಂಎ ಕಂಪನಿ ಹಾಗೂ ಇದರ ಮಾಲೀಕ ಮೊಹಮದ್ ಮನ್ಸೂರ್ ಖಾನ್​ಗೆ ಸೇರಿದ 450 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಯನ್ನು ಜಪ್ತಿ ಮಾಡಿರುವ ಸಕ್ಷಮ ಪ್ರಾಧಿಕಾರ, ಇದನ್ನು ಗ್ರಾಹಕರಿಗೆ ಹಿಂದಿರುಗಿಸಲು ಹೊಸ ಆಪ್ ರೂಪಿಸಲು ಮುಂದಾಗಿತ್ತು. ಆಪ್​ಗೆ ಐಎಂಎ ಗ್ರಾಹಕರ ಆಧಾರ್ ನಂಬರ್ ಜೋಡಿಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಧಾರ್​ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಸಕ್ಷಮ ಪ್ರಾಧಿಕಾರವು ಪತ್ರದ ಮೂಲಕ ಅನುಮತಿ ಕೇಳಿದೆ. ಆದರೆ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಂದು ತಿಂಗಳಲ್ಲಿ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಆಧಾರ್ ಲಿಂಕ್ ಮಾಡಲು ಅನುಮತಿ ಸಿಕ್ಕ ಕೂಡಲೇ ಆಪ್ ಕಾರ್ಯರೂಪಕ್ಕೆ ಬರಲಿದ್ದು, ಸಕ್ಷಮ ಪ್ರಾಧಿಕಾರವು ಗ್ರಾಹಕರಿಂದ ಅರ್ಜಿ ಆಹ್ವಾನಿಸಲಿದೆ. ಗ್ರಾಹಕರು ಆಪ್​ನ್ನು ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡು, ಅದರಲ್ಲಿ ಬರುವ ಆಯ್ಕೆಯನ್ನು ಭರ್ತಿ ಮಾಡಿ ಸರ್ಕಾರಿ ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಗ್ರಾಹಕರ ಮಾಹಿತಿ ಅಳವಡಿಕೆ: ಆಪ್ ರೂಪಿಸಿ ಗ್ರಾಹಕರಿಗೆ ಪರಿಹಾರ ಹಿಂದಿರುಗಿಸಲು ರಾಜ್ಯ ಸರ್ಕಾರ ನಾಲ್ಕು ತಿಂಗಳ ಹಿಂದೆಯೇ ಸಕ್ಷಮ ಪ್ರಾಧಿಕಾರಕ್ಕೆ ಅನುಮತಿ ನೀಡಿದೆ. ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಐಎಂಎ ಕಂಪನಿ ನೀಡಿದ ಐಡಿ ಕಾರ್ಡ್, ಆಧಾರ್, ಮೊಬೈಲ್ ಹಾಗೂ ರೇಷನ್ ಕಾರ್ಡ್ ನಂಬರ್​ನ ಮಾಹಿತಿಯನ್ನು ಆಪ್​ಗೆ ಅಳವಡಿಸಲಾಗುತ್ತದೆ. ಗ್ರಾಹಕರು ಹೂಡಿಕೆ ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಶೇಕಡಾ ಲೆಕ್ಕದಲ್ಲಿ ಹಣ ಹಿಂದಿರುಗಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ. ಹೂಡಿಕೆ ಮಾಡಿದ ಅಷ್ಟೂ ಹಣ ಸಿಗದಿದ್ದರೂ

ಸ್ವಲ್ಪ ಪ್ರಮಾಣದಲ್ಲಿ ಸಿಗಬಹುದು ಎನ್ನಲಾಗಿದೆ. ಈಗಾಗಲೇ ವಂಚನೆಗೊಳಗಾದ 55 ಸಾವಿರಕ್ಕೂ ಅಧಿಕ ಮಂದಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ, ಆಪ್ ಮೂಲಕ ಪರಿಹಾರ ಪಡೆಯಲು ಇನ್ನಷ್ಟು ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

ಕರೊನಾ ಅಡ್ಡಿ

ಕರೊನಾ ಭೀತಿ ಹಿನ್ನೆಲೆಯಲ್ಲಿ ಸದ್ಯ ಐಎಂಎ ಪ್ರಕರಣದಲ್ಲಿ ಪರಿಹಾರ ವಿತರಣೆಗೆ ಸಂಬಂಧಿಸಿದ ಕಾರ್ಯಗಳನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಇದರಿಂದ ಆಪ್ ಕಾರ್ಯ ರೂಪಕ್ಕೆ ಬರುವುದು ವಿಳಂಬವಾಗಲಿದೆ. ಐಎಂಎ ಗ್ರಾಹಕರ ಕೈಗೆ ಪರಿಹಾರ ಸಿಗಲು ಇನ್ನಷ್ಟು ಸಮಯ ಹಿಡಯಬಹುದು ಎಂದು ಮೂಲಗಳು ತಿಳಿಸಿವೆ.

ತೆರಿಗೆ ಮೊತ್ತ ಮರುಪಾವತಿ

ಐಎಂಎ ಕಂಪನಿ ನಷ್ಟದಲ್ಲಿದ್ದರೂ ಗ್ರಾಹಕರನ್ನು ಆಕರ್ಷಿಸಲು ಭಾರಿ ಲಾಭ ಗಳಿಸುತ್ತಿರುವುದಾಗಿ ತಪ್ಪುಲೆಕ್ಕ ತೋರಿಸಿ ಕೋಟ್ಯಂತರ ರೂ. ಆದಾಯ ತೆರಿಗೆ ಪಾವತಿಸಿದೆ. ಸಕ್ಷಮ ಪ್ರಾಧಿಕಾರವು ಈ ಮೊತ್ತವನ್ನು ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿ ಮಾಡಿಕೊಳ್ಳಲು ಮುಂದಾಗಿದ್ದು, ಇದನ್ನು ವಂಚನೆಗೊಳಗಾದವರಿಗೆ ಮರಳಿಸಲು ನಿರ್ಧರಿಸಿದೆ. ಐಎಂಎ ಕಂಪನಿ ವ್ಯವಹಾರದ ಬಗ್ಗೆ ಡೆಲೋಯಿಟ್ ಸಂಸ್ಥೆ ಲೆಕ್ಕಪರಿಶೋಧನೆ ನಡೆಸಿದೆ. ಡೆಲೋಯಿಟ್ ಸಂಸ್ಥೆ ಆಡಿಟ್ ನಡೆಸಿದ ವರದಿ ಆಧಾರದಲ್ಲಿ ಹಣ ಮರು ಪಾವತಿಸಲು ಐಟಿ ಇಲಾಖೆಗೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಐಎಂಎ ಕಂಪನಿ ಲಾಭದಲ್ಲಿರಲಿಲ್ಲ. ಆದರೆ, ಕಂಪನಿ ಲಾಭದಲ್ಲಿದೆ ಎಂದು ತೋರಿಸಲು ಬ್ಯಾಲೆನ್ಸ್ ಶೀಟ್​ನಲ್ಲಿ ತಪು್ಪಲೆಕ್ಕ ತೋರಿಸಿ ಕೋಟ್ಯಂತರ ರೂ. ಆದಾಯ ತೆರಿಗೆ ಪಾವತಿಸಿರುವ ಅಂಶ ಬೆಳಕಿಗೆ ಬಂದಿದೆ.

ಅವಿನಾಶ ಮೂಡಂಬಿಕಾನ