ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಶಾಸಕ ರೋಷನ್ ಬೇಗ್ರನ್ನು ಮತ್ತೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.
ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ರೋಷನ್ ಬೇಗ್ರನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಬೇಗ್, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಸೋಮವಾರ ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಯಿಂದ ಜೈಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಜೈಲಿನಲ್ಲೇ ಪ್ರತ್ಯೇಕ ಕೋಣೆಯಲ್ಲೇ ಬೇಗ್ಗೆ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ.
ಮುಂದಿನ ಕೋರ್ಟ್ ಆದೇಶ ಅಥವಾ ಬೇಲ್ ಸಿಗುವವರೆಗೂ ಬೇಗ್ ಜೈಲಿನಲ್ಲೇ ಇರಬೇಕಿದೆ. ಹೆಚ್ಚಿನ ತನಿಖೆಗಾಗಿ ಬೇಗ್ರನ್ನು ಸಿಬಿಐ ಕಸ್ಟಡಿಗೆ ಕೇಳಿತ್ತು. ಆದರೆ ಆ ಸಮಯವನ್ನು ಅನಾರೋಗ್ಯದಿಂದ ಆಸ್ಪತ್ರೆಯಲ್ಲೇ ಬೇಗ್ ಕಳೆದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶದ ನಂತರ ಸಿಬಿಐ ಕಸ್ಟಡಿಗೆ ನೀಡುವ ಸಾಧ್ಯತೆ ಇದೆ.