ಬೆಂಗಳೂರು : ಮಾಜಿ ಸಚಿವ ರೋಷನ್ ಬೇಗ್ ಹಾಗೂ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ಮನ್ಸೂರ್ ಖಾನ್ ಮಧ್ಯೆ ಹಣಕಾಸು ವ್ಯವಹಾರ ನಡೆದಿರುವುದು ನಿಜವೆಂಬ ವಿಚಾರವನ್ನು ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ತನಿಖಾಧಿಕಾರಿ ಹರ್ಷಗುಪ್ತಾ ಬಯಲಿಗೆಳೆದಿದ್ದಾರೆ. ಬೇಗ್ ಕುರಿತು ಸಿಬಿಐ ಅಧಿಕಾರಿಗಳಿಂದ ಕೂಡಲೇ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವಂತೆ ನ.19ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಈ ವಿಚಾರ ಬಹಿರಂಗಗೊಂಡಿದೆ.
ಇಬ್ಬರ ವ್ಯವಹಾರಕ್ಕೆ ದಾಖಲೆಗಳು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ ವ್ಯವಸ್ಥಾಪಕರಿಗೆ ಕಚೇರಿಯ ಕಟ್ಟಡದ ವಿಚಾರದಲ್ಲಿ ಮಾಡಿಕೊಂಡಿರುವ ಗುತ್ತಿಗೆ ಸಂಬಂಧ ನೀಡಿರುವ ಪತ್ರದಲ್ಲಿ ಸಿಯಾಸತ್ ಪತ್ರಿಕೆಯಲ್ಲಿ ಐಎಂಎ ಪಾಲುದಾರ ಎಂಬುದನ್ನು ಉಲ್ಲೇಖಿಸಲಾಗಿದೆ.
ಸಿಬಿಐ ಅಧಿಕಾರಿಗಳಿಂದ ಅದಷ್ಟು ಬೇಗ ವರದಿ ತರಿಸಿಕೊಂಡು ಬೇಗ್ಗೆ ಸಂಬಂಧಪಟ್ಟ ಆಸ್ತಿಗಳ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಮೂಲಕ ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಬೇಕು. ಬೇಗ್ ಈ ಪ್ರಕರಣದ ಫಲಾನುಭವಿ ಹಾಗೂ ಐಎಂಎ ವಂಚನೆಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಹರ್ಷಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ಪೆಂಟ್ರಿ ರಸ್ತೆಯಲ್ಲಿರುವ ಡ್ಯಾನಿಶ್ ಪಬ್ಲಿಕೇಷನ್ ಲಿ. ಮೂಲಕ ‘ದಿ ಸಿಯಾಸತ್ ಡೈಲಿ’ ಉರ್ದು ಪತ್ರಿಕೆ ನಡೆಸುತ್ತಿದ್ದ ಬೇಗ್, ಪತ್ರಿಕೆ ಮೂಲಕ ಐಎಂಎ ಪರ ಪ್ರಚಾರ ಮಾಡಿ ಇಲ್ಲಿ ಹಣ ಹೂಡಿಕೆ ಮಾಡುವಂತೆ ಸಾರ್ವಜನಿಕರನ್ನು ಸೆಳೆಯುತ್ತಿದ್ದರು. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರನ್ನು ಆಕರ್ಷಿಸಲಾಗುತ್ತಿತ್ತು. ಒಂದು ಸಮುದಾಯದ ಜನರನ್ನು ಐಎಂಎನಲ್ಲಿ ಹಣ ಹೂಡಿಕೆ ಮಾಡುವಂತೆ ಬೇಗ್ ಪ್ರೇರೇಪಿಸಿದ್ದರು. ಜನರನ್ನು ಐಎಂಎನತ್ತ ಸೆಳೆಯಲು ಮನ್ಸೂರ್ನಿಂದ ಬೇಗ್ ಕೋಟಿ ಕೋಟಿ ಹಣ ಹಾಗೂ ದುಬಾರಿ ಉಡುಗೊರೆ ಪಡೆದುಕೊಂಡಿದ್ದಾರೆ. ಡ್ಯಾನಿಶ್ ಪಬ್ಲಿಕೇಷನ್ ಕಚೇರಿ ಪರಿಶೀಲಿಸಿದಾಗ ಐಎಂಎಗೆ ಸೇರಿದ ಹಲವು ಪತ್ರಗಳು ಲಭ್ಯವಾಗಿವೆ. ಮನ್ಸೂರ್ ಹಾಗೂ ಬೇಗ್ ನಡುವಿನ ವ್ಯವಹಾರಗಳ ಬಗ್ಗೆಯೂ ಸುಳಿವು ಸಿಕ್ಕಿದೆ. ರಾಜಕೀಯವಾಗಿಯೂ ಐಎಂಎ ಕಂಪನಿಯಿಂದ ಬೇಗ್ ಸಹಾಯ ಪಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.