ಜಗಳೂರು: ಸರ್ಕಾರಿ ಬಸ್ ಸಂಪರ್ಕವೇ ಕಾಣದ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಕ್ಕೆ ಬಸ್ ಬಂದಿದ್ದು, ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಬರಮಾಡಿಕೊಂಡರು.
ತಾಲೂಕು ಕೇಂದ್ರದಿಂದ ಕೇವಲ 7 ಏಳು ಕಿಮೀ ದೂರದ ಕೆಳಗೋಟೆ ಗ್ರಾಮದಲ್ಲಿ ಸ್ವತಂತ್ರ ಭಾರತ ಇತಿಹಾಸದಲ್ಲಿಯೇ ಸರ್ಕಾರಿ ಬಸ್ ಕಂಡಿಲ್ಲ. ಕೇವಲ ಆಟೋ, ಬೈಕ್, ಟ್ರಾೃಕ್ಟರ್‌ಗಳಿಗೆ ಸೀಮಿತವಾಗಿದ್ದ ಜನತೆ, ಒಮ್ಮೊಮ್ಮೆ ಕಾಲ್ನಡಿಗೆಯಿಂದ ಪಟ್ಟಣಕ್ಕೆ ಬಂದಿದ್ದಾರೆ.
ಬಸ್ ಓಡಿಸುವಂತೆ ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಸಂಘಟನೆಗಳು ಮನವಿ ಸಲ್ಲಿಸಿದ್ದವು.
ಏಳೂವರೆ ದಶಕಗಳ ನಂತರ ಗ್ರಾಮದಲ್ಲಿ ಬಸ್ ಕಂಡು ವಿದ್ಯಾರ್ಥಿಗಳು, ಕೂಲಿಕಾರರಲ್ಲಿ ಹರ್ಷ ಮೂಡಿದೆ. ಬಸ್ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಸೇರಿ ನಾಲ್ಕು ಬಾರಿ ಕೆಳಗೋಟೆ, ಖಿಲಾ ಕಣುಕುಪ್ಪೆ, ಚಿಕ್ಕಮ್ಮನಹಟ್ಟಿ ಗ್ರಾಮದ ಮೂಲಕ ಜಗಳೂರಿಗೆ ಸಂಚರಿಸಲಿದೆ.
ಗ್ರಾಮದ ಮುಖಂಡ ಅಹಮದ್ ಅಲಿ ಮಾತನಾಡಿ, ಈಗ ಬಸ್ ಭಾಗ್ಯ ಒದಗಿ ಬಂದಿರುವುದು ಸಂತಸವಾಗಿದೆ. ಇದಕ್ಕೆ ಕಾರಣರಾದ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಅಭಿನಂದಿಸುತ್ತೇವೆ ಎಂದರು.
ಶಾಸಕರ ಸ್ಪಂದನೆ: ತಿಂಗಳ ಹಿಂದೆ ಗ್ರಾಮದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಐದಾರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದ ಗ್ರಾಮದವರು ಶಾಸಕ ಬಿ. ದೇವೇಂದ್ರಪ್ಪ ಅವರ ನಿವಾಸಕ್ಕೆ ತೆರಳಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಕೂಡಲೇ ಶಾಸಕರು ಕೆಎಸ್‌ಆರ್‌ಟಿಸಿ ವಿಭಾಗ ಅಧಿಕಾರಿಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದರು.