ಜಿಲ್ಲೆ

ತಂಬಾಕು ವ್ಯಸನದಿಂದ ಅನಾರೋಗ್ಯ, ಜಿಲ್ಲಾಧಿಕಾರಿ ರವೀಂದ್ರ ಎಚ್ಚರಿಕೆ, ದುಶ್ಚಟಗಳನ್ನು ತ್ಯಜಿಸಲು ಕಿವಿಮಾತು

Bengaluru Rural

ಬೆಂಗಳೂರು ಗ್ರಾಮಾಂತರ: ತಂಬಾಕಿನಿಂದ ತಯಾರಿಸುವ ಯಾವುದೇ ಉತ್ಪನ್ನ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುವುದರಿಂದ ತಂಬಾಕು ಉತ್ಪನ್ನಗಳ ಸೇವನೆ ತ್ಯಜಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋಟ್ಪಾ 2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ತಂಬಾಕು ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಿಂದ ಅಧಿಕಾರಿ ಮತ್ತು ಸಿಬ್ಬಂದಿ ಮತ್ತಷ್ಟು ಉತ್ತೇಜನಕಾರಿಯಾಗಿ ಕೆಲಸ ಮಾಡಲು ನೆರವಾಗುತ್ತದೆ. ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆಯನ್ನು ನಿಯಂತ್ರಣದಲ್ಲಿಡಲು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಮತ್ತಷ್ಟು ಶ್ರಮಿಸಬೇಕು ಎಂದರು.

ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳ ಪ್ರದರ್ಶನಕ್ಕೂ ಮುನ್ನ ತಂಬಾಕು ಸೇವನೆಯಿಂದ ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳ ಕುರಿತು ಧೂಮಪಾನ ಆರೋಗ್ಯಕ್ಕೆ ಹಾನಿಕಾರವೆಂಬ ದೃಶ್ಯವನ್ನು ಪ್ರಸಾರ ಮಾಡುವ ಮೂಲಕ ಈ ಬಗ್ಗೆ ಮೂಡಿಸುತ್ತಿರುವ ಜಾಗೃತಿಯನ್ನು ಸಾರ್ವಜನಿಕರು ಅರ್ಥೈಸಿಕೊಂಡು, ತಂಬಾಕು ಉತ್ಪನ್ನಗಳ ವ್ಯಸನದಿಂದ ಮುಕ್ತರಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಾಲಕಾಲಕ್ಕೆ ಅಧಿಕಾರಿಗಳ ತಂಡ ತಂಬಾಕು ಉತ್ಪನ್ನ ಮಾರಾಟ ಮತ್ತು ಸೇವನೆ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ದಂಡ ವಿಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಬಾರದು ಎಂದು ಅರಿವು ಮೂಡಿಸಬೇಕು ಎಂದರು.

ತಂಬಾಕು ವ್ಯಸನ ಬಿಡಿಸಲು ದೊಡ್ಡಬಳ್ಳಾಪುರದಲ್ಲಿ ತಂಬಾಕು ವ್ಯಸನಮುಕ್ತ ಕೇಂದ್ರವನ್ನು ಶುರು ಮಾಡಲಾಗಿದ್ದು, ವ್ಯಸನಿಗಳನ್ನು ಗುರುತಿಸಿ ಸಮಾಲೋಚನೆ ನಡೆಸಲಾಗುತ್ತಿದೆ. ಕಾಲಕಾಲಕ್ಕೆ ತಂಬಾಕು ಉತ್ಪನ್ನಗಳ ವ್ಯಸನಿಗಳನ್ನು ಮುಕ್ತ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣದ ಬಗ್ಗೆ ನಾವು ತುಲನಾತ್ಮಕವಾಗಿ ಯೋಚನೆ ಮಾಡಬೇಕು. 18-50 ವರ್ಷ ವಯೋಮಾನದವರು ತಂಬಾಕಿನ ವ್ಯಸನಕ್ಕೆ ಬಲಿಯಾಗುತ್ತಿರುವುದರಿಂದ ದೇಶದಲ್ಲಿ ಸಾಮಾಜಿಕವಾಗಿ, ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ತಂಬಾಕು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿದು, ಸುತ್ತಮುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ, ಆರೋಗ್ಯ ಹಾಳುಮಾಡಿಕೊಳ್ಳುವುದು ಸಮಂಜಸವಲ್ಲ, ಜವಾಬ್ದಾರಿಯುತ ನಾಗರಿಕರಾಗಿ ಶುಚಿತ್ವ ಕಾಪಾಡಿಕೊಳ್ಳಲು ತಿಳಿಸಿದರು.

ಆರೋಗ್ಯ ಇಲಾಖೆ ಅಧಿಕಾರಿ ಡಾ.ಧರ್ಮೇಂದ್ರ, ಡಾ. ವಿದ್ಯಾರಾಣಿ, ಅಬಕಾರಿ ಪೊಲೀಸ್ ಉಪ ಅಧೀಕ್ಷಕ ರವೀಂದ್ರ ಹಾಜರಿದ್ದರು.