ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಯು ತಮ್ಮ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆ ಮಾಡದೆ ತೀವ್ರ ತೊಂದರೆಯಾಗಿದೆ. ಕಲುಷಿತ ನೀರು ಸೇವನೆಯಿಂದ ಗ್ರಾಮದ ನಿವಾಸಿಗಳು ಅನಾರೋಗ್ಯಕ್ಕೊಳಗಾಗುತ್ತಿದ್ದರೂ ಸಂಬಂಧಪಟ್ಟವರು ಸುಮ್ಮನಿದ್ದಾರೆ ಎಂದು ತಾಲೂಕಿನ ಉಪಕಾರ ಗ್ರಾಮದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿರುವ ಉಪಕಾರ ಗ್ರಾಮದಲ್ಲಿ ಸುಮಾರು 600 ಜನಸಂಖ್ಯೆಯಿದ್ದು ಹಿಂದುಳಿದ ಪರಿಶಿಷ್ಟ ಜನಾಂಗದವರೇ ನೆಲೆಸಿದ್ದಾರೆ. ಬೊಮ್ಮನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೆ, ಗ್ರಾಮಪಂಚಾಯಿತಿಯು ಕೊಳವೆ ಬಾವಿಗಳ ಮೂಲಕ ತೊಂಬೆಗಳಿಗೆ ನೀರಿನ ಸರಬರಾಜು ಮಾಡುತ್ತಿದೆ.
ಆದರೆ, ಗ್ರಾಮಕ್ಕೆ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡುತ್ತಿದ್ದ ಮೋಟಾರು ಕೆಟ್ಟಿದ್ದರೂ ಗ್ರಾಮಪಂಚಾಯಿತಿಯಿಂದ ಅದನ್ನು ರಿಪೇರಿ ಮಾಡಿಸಿಲ್ಲ. ಇದರಿಂದ ಕಳೆದ ಒಂದು ವಾರದಿಂದ ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಸ್ಥಗಿತವಾಗಿದ್ದು ಎಲ್ಲ ಮನೆಯವರು ಕುಡಿಯುವ ಮತ್ತು ಗೃಹಬಳಕೆಯ ನೀರಿಗಾಗಿ ಬೋರ್‌ವೆಲ್ ಅನ್ನೇ ಅವಲಂಬಿಸುವಂತಾಗಿದೆ. ಬಹಳ ಕಾಲದಿಂದ ಬಳಕೆಯಿಲ್ಲದ ಬೋರ್‌ವೆಲ್‌ನಿಂದ ನೀರೆತ್ತುವುದು ಗ್ರಾಮದ ಜನತೆಗೆ ತುಂಬಾ ಸವಾಲಾಗುತ್ತಿದೆ. ಅಂಗವಿಕಲರು, ಮಹಿಳೆಯರು, ಮಕ್ಕಳು ಕೈಪಂಪ್ ಒತ್ತಲು ಹರಸಾಹಸಪಡಬೇಕಾಗಿದೆ. ಇಬ್ಬರು ಮೂವರು ಸೇರಿ ಪಂಪ್ ಮಾಡಿದರೆ ಮಾತ್ರ ನೀರು ಹೊರಬರುತ್ತಿದೆ. ಅಲ್ಲದೆ ಇತ್ತೀಚೆಗೆ ಮಳೆಬಿದ್ದಿರುವುದರಿಂದ ಬೋರ್‌ವೆಲ್‌ನಲ್ಲಿ ಕೆಸರು ಮಿಶ್ರಿತ ನೀರು ಬರುತ್ತಿದೆ. ನೀರಿನ ಜತೆಗೆ ಎಣ್ಣೆಯಂಥ ದ್ರವ ಬರುತ್ತಿದ್ದು, ಇದನ್ನು ಸೇವಿಸಿದವರು ಜ್ವರ ಕೆಮ್ಮು, ಮೈ-ಕೈನೋವು ಮುಂತಾದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯಕ್ಕೊಳಗಾಗುತ್ತಿರುವ ನಿವಾಸಿಗಳು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಈ ಬಗ್ಗೆ ಗ್ರಾಮಪಂಚಾಯಿತಿಗೆ ಮನವಿ ಮಾಡಿದರೂ ಬೋರ್‌ವೆಲ್ ನೀರು ಕುಡಿಯಿರಿ ಎಂದು ಸಲಹೆ ನೀಡುತ್ತಿದ್ದಾರೆ ಎಂದು ಗ್ರಾಮದ ಗೋಪಾಲ, ರಾಜೇಂದ್ರ, ಮರಿಸಿದ್ದ ಹಾಗೂ ಶಿವಕುಮಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕೊಳವೆಬಾವಿಯ ಮೋಟಾರ್ ಮತ್ತು ಪಂಪ್ ಕೆಟ್ಟುಹೋಗಿದ್ದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನೀರು ಪೂರೈಸುವಂತೆ ಸೂಚಿಸಲಾಗಿದೆ. ಮೋಟಾರ್ ಮತ್ತು ಪಂಪ್ ಅಳವಡಿಸಿ ಸದ್ಯದಲ್ಲಿಯೇ ಹಿಂದಿನಂತೆ ಮನೆಗಳಿಗೆ ನೀರು ಪೂರೈಸಲಾಗುವುದು. ರವಿಚಂದ್ರ, ಅಭಿವೃದ್ಧಿ ಅಧಿಕಾರಿ ಬೊಮ್ಮನಹಳ್ಳಿ ಗ್ರಾಮಪಂಚಾಯಿತಿ