ಜಿಲ್ಲೆ

ತರಕಾರಿ ಪಿಕಪ್‌ನಲ್ಲಿ ದನ ಅಕ್ರಮ ಸಾಗಾಟ

ಮಂಗಳೂರು: ತರಕಾರಿ ಸಾಗಾಟ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಅಡಗಿಸಿ ಸಾಗಿಸುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.

ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ಪಂಪ್‌ವೆಲ್ ಬಳಿ ಪಿಕಪ್ ವಾಹನವನ್ನು ಅಡ್ಡಹಾಕಿದ್ದು ಅದರಲ್ಲಿದ್ದ 12 ಜಾನುವಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗೋ ಸಾಗಾಟಗಾರರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಒಟ್ಟು 8 ದನಗಳು ಹಾಗೂ 4 ಕರುಗಳು ಈ ಪಿಕಪ್‌ನಲ್ಲಿ ತುಂಬಲ್ಪಟ್ಟಿದ್ದು ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ತರಲಾಗುತ್ತಿತ್ತು. ಕೆಳಭಾಗದಲ್ಲಿ ಜಾನುವಾರುಗಳನ್ನು ಕಟ್ಟಿ, ಮೇಲಿನಿಂದ ಗೊತ್ತಾಗದಂತೆ ತರಕಾರಿ ತುಂಬಿಸುವ ಕ್ರೇಟ್‌ಗಳನ್ನು ಇರಿಸಲಾಗಿತ್ತು.

ಈ ಮೊದಲು ಹಾಲಿನ ವ್ಯಾನ್, ಮೀನು ಸಾಗಾಟ ಟೆಂಪೋದಲ್ಲೂ ಇದೇ ರೀತಿ ಗೋವುಗಳನ್ನು ಹಾಗೂ ಗೋಮಾಂಸವನ್ನು ಸಾಗಿಸಿದ ಪ್ರಕರಣಗಳು ನಡೆದಿವೆ. ಕಂಕನಾಡಿ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.