ಜಿಲ್ಲೆ

ಗೋವು ಅಕ್ರಮ ಸಾಗಾಟ ಪತ್ತೆ, ಮೂವರು ವಶಕ್ಕೆ

Dakshina Kannada

ಬೆಳ್ತಂಗಡಿ: ನಡ ಗ್ರಾಮದ ಮಂಜೊಟ್ಟಿ ಅಂತ್ರಾಯಪಲ್ಕೆ ಎಂಬಲ್ಲಿ ಗುರುವಾರ ಮುಂಜಾನೆ ಗೋ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ವಾಹನ ಹಾಗೂ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಕಾರನ್ನು ಪೊಲೀಸರು ತಪಾಸಣೆಗೆಂದು ತಡೆದು ನಿಲ್ಲಿಸಿದಾಗ ಅದರ ಚಾಲಕ ರವೂಫ್ ಎಂಬಾತ ಓಡಿ ಪರಾರಿಯಾಗಿದ್ದಾನೆ. ಕಾರಿನ ಹಿಂದುಗಡೆ ಬರುತ್ತಿದ್ದ ಮತ್ತೊಂದು ವಾಹನವನ್ನು ತಪಾಸಣೆ ನಡೆಸಿದಾಗ ಎರಡು ದನ ಹಾಗೂ ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ತುಂಬಿಸಿರುವುದು ಕಂಡುಬಂದಿದೆ.

ಹಿಂಬದಿಯ ವಾಹನದಲ್ಲಿದ್ದ ಆರೋಪಿಗಳಾದ ರಫೀಕ್, ರಜಾಕ್ ಪಿ. ಹಾಗೂ ನಾಗೇಶ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬೆಳ್ತಂಗಡಿ ಠಾಣೆ ಪಿಎಸ್‌ಐ ನಂದಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಎರಡು ವಾಹನ ಹಾಗೂ ಜಾನುವಾರು ಸಹಿತ ಒಟ್ಟು 4.15 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.